ಸಿನಿಮಾ ಸುದ್ದಿ

ನಟಿ ಸೌಂದರ್ಯ ಕೊಲೆ ಆರೋಪದ ಬಗ್ಗೆ ಪತಿ ಸ್ಪಷ್ಟನೆ

Share It

ತೆಲುಗು ಚಿತ್ರರಂಗದ ನಂ.1 ನಾಯಕಿ ನಟಿಯಾಗಿದ್ದ ಕರ್ನಾಟಕದ ಮೂಲದ ಸೌಂದರ್ಯ ಅವರ ಸಾವಿನ ಪ್ರಕರಣ 20 ವರ್ಷಗಳ ಬಳಿಕ ಮತ್ತೆ ಸುದ್ದಿಗೆ ಬಂದಿದೆ. ಸೌಂದರ್ಯ 2004ರಲ್ಲಿ ಬೆಂಗಳೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ್ದರು.

ಸೌಂದರ್ಯ ಜತೆಗೆ ಅವರ ಸಹೋದರ ಸಹ ಅದೇ ದುರ್ಘಟನೆಯಲ್ಲಿ ನಿಧನ ಹೊಂದಿದ್ದರು. ಆದರೆ ಕೆಲ ದಿನಗಳ ಹಿಂದಷ್ಟೇ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆ, ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಎಂಬಾತ ಪೊಲೀಸರಿಗೆ ದೂರು ನೀಡಿದ್ದು, ಆಸ್ತಿಯ ಆಸೆಗಾಗಿ ನಟಿ ಸೌಂದರ್ಯರನ್ನು ತೆಲುಗು ಚಿತ್ರರಂಗದ ನಿರ್ಮಾಪಕ ಹಾಗೂ ನಟ ಮೋಹನ್ ಬಾಬು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಸುದ್ದಿ ಸಂಚಲನವಾಗಿ ಮಾರ್ಪಾಡಾಗಿದೆ. ಈ ಬಗ್ಗೆ ಸೌಂದರ್ಯ ಅವರ ಪತಿ ಜಿ.ಎಸ್​ ರಘು ಪ್ರತಿಕ್ರಿಯೆ ನೀಡಿದ್ದಾರೆ.

ಕೆಲ ತೆಲುಗು ಮಾಧ್ಯಮಗಳು ಸೌಂದರ್ಯ ಅವರ ಪತಿ ಜಿ.ಎಸ್​ ರಘು ಅವರ ಪ್ರತಿಕ್ರಿಯೆ ಪ್ರಕಟಿಸಿದ್ದು, ‘ಮೋಹನ್ ಬಾಬು ಅವರು ಸೌಂದರ್ಯ ಅವರ ಕೊಲೆ ಮಾಡಿಸಿದ್ದಾರೆ ಎಂಬ ಆಧಾರ ಪೂರ್ಣವಾಗಿ ಸುಳ್ಳು, ಆಧಾರರಹಿತ’ ಎಂದಿದ್ದಾರೆ. ಮೋಹನ್ ಬಾಬು ಅವರು ಅಕ್ರಮವಾಗಿ ಸೌಂದರ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನೂ ತಳ್ಳಿ ಹಾಕಿರುವ ರಘು, ‘ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿರುವ ಮೋಹನ್ ಬಾಬು ಮತ್ತು ಶ್ರೀಮತಿ ಸೌಂದರ್ಯ ಅವರ ಆಸ್ತಿಯ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿದೆ.

ಆಸ್ತಿಯ ಬಗ್ಗೆ ಹರಡಿರುವ ಆಧಾರರಹಿತ ಸುದ್ದಿಯನ್ನು ನಾನು ನಿರಾಕರಿಸುತ್ತೇನೆ. ಮೋಹನ್ ಬಾಬು, ನನ್ನ ಪತ್ನಿ ದಿವಂಗತ ಶ್ರೀಮತಿ ಸೌಂದರ್ಯ ಅವರಿಂದ ಅಕ್ರಮವಾಗಿ ಯಾವುದೇ ಆಸ್ತಿಯನ್ನು ವಶಪಡಿಸಿಕೊಂಡಿಲ್ಲ ಎಂದು ನಾನು ದೃಢೀಕರಿಸುತ್ತೇನೆ. ನನಗೆ ತಿಳಿದಮಟ್ಟಿಗೆ ನಾವು ಅವರೊಂದಿಗೆ ಯಾವುದೇ ಭೂ ವ್ಯವಹಾರಗಳನ್ನು ನಡೆಸಿಲ್ಲ’ ಎಂದಿದ್ದಾರೆ.

‘ಮೋಹನ್ ಬಾಬು ಅವರು ನನಗೆ 25 ವರ್ಷಗಳಿಂದಲೂ ಪರಿಚಯ, ನಮ್ಮ ಕುಟುಂಬದೊಟ್ಟಿಗೆ ಅತ್ಯಾಪ್ತ ಬಂಧವನ್ನು ಅವರು ಹೊಂದಿದ್ದಾರೆ. ನನ್ನ ಪತ್ನಿ, ನನ್ನ ಬಾಮೈದ, ನನ್ನ ಅತ್ರೆ ಅವರು ಸಹ ಮೋಹನ್ ಬಾಬು ಅವರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ವೈಯಕ್ತಿಕವಾಗಿ ನಾನು ಮೋಹನ್ ಬಾಬು ಅವರನ್ನು ಗೌರವಿಸುತ್ತೇನೆ. ಅವರ ಮೇಲೆ ಹೇರಲಾಗುತ್ತಿರುವ ಸುಳ್ಳು ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಸೌಂದರ್ಯ ಅವರ ಸಾವು ಅಪಘಾತವೇ ಹೊರತು ಮತ್ತೇನೂ ಅಲ್ಲ. ವಿನಾಃಕಾರಣ ಸುಳ್ಳು ಸುದ್ದಿ ಹರಡುವುದು ಬೇಡವೆಂದು ನಾನು ಮನವಿ ಮಾಡುತ್ತೇನೆ’ ಎಂದಿದ್ದಾರೆ ರಘು.

ಸೌಂದರ್ಯ ಅವರು 2004 ರಲ್ಲಿ ರಾಜಕೀಯ ಪಕ್ಷವೊಂದರ ಪರ ಪ್ರಚಾರಕ್ಕೆ ತೆರಳುವ ವೇಳೆ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿದರು. ಸೌಂದರ್ಯ ನಿಧನ ಹೊಂದಿದ ಸಮಯದಲ್ಲಿ ಅವರು ಮೋಹನ್ ಬಾಬು ಅವರ ಸಿನಿಮಾದಲ್ಲಿ ನಟಿಸುತ್ತಿದ್ದರು.

ಈಗ ಎದುರುಗಟ್ಲ ಚಿಟ್ಟಿಬಾಬು ಎಂಬಾತ ನೀಡಿರುವ ದೂರಿನ ಅನ್ವಯ, ಸೌಂದರ್ಯ ಅವರು ಶಂಷಾಬಾದ್​ನಲ್ಲಿ ಖರೀದಿಸಿದ್ದ ಆರು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಮೋಹನ್ ಬಾಬು ಉಪಾಯವಾಗಿ ಸೌಂದರ್ಯ ಅವರನ್ನು ಕೊಲೆ ಮಾಡಿಸಿ ಆ ಜಮೀನನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಅಲ್ಲಿಯೇ ಮನೆ ಸಹ ಕಟ್ಟಿಸಿದ್ದಾರೆ ಎಂದಿದ್ದಾರೆ.


Share It

You cannot copy content of this page