ಡಬಲ್ ಆಯ್ತು ಬಿಜೆಪಿಯ ವಾರ್ಷಿಕ ಆದಾಯ: ವಿವಾದದ ನಡುವೆಯೂ ಎಲೆಕ್ಟ್ರೋಲ್ ಬಾಂಡ್ ಮೂಲಕ ಹರಿದು ಬಂತು ಹಣ
ಬೆಂಗಳೂರು: ಆಡಳಿತಾರೂಢ ಬಿಜೆಪಿಯ ವಾರ್ಷಿಕ ಆದಾಯ 2022-23 ನೇ ಸಾಲಿಗಿಂತ 2023-24 ನೇ ಸಾಲಿನಲ್ಲಿ ದುಪ್ಪಟ್ಟಾಗಿದ್ದು, ಎಲೆಕ್ಟ್ರೋಲ್ ಬಾಂಡ್ ಮೂಲಕ ದಾಖಲೆಯ 1685.6 ಕೋಟಿ ಸಂಗ್ರಹವಾಗಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಡಿಟ್ ವರದಿಯಲ್ಲಿ ವಾರ್ಷಿಕ ಆದಾಯದಲ್ಲಿ ಶೇ.82 ರಷ್ಟು ಹೆಚ್ಚಾಗಿದ್ದು, 2022-23 ರಲ್ಲಿ 2360 ರೂ ಇದ್ದ ಆದಾಯ 2023-24 ನೇ ಸಾಲಿನಲ್ಲಿ 4340.5 ಕೋಟಿ ರು.ಗಳಿಗೆ ಹೆಚ್ಚಾಗಿದೆ. ಇದಕ್ಕೆ 1685.6 ಕೋಟಿ ರು.ಗಳ ಎಲೆಕ್ಟ್ರೋಲ್ ಬಾಂಡ್ ಕೊಡುಗೆಯೇ ಹೆಚ್ಚು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಆದಾಯವೂ 452.4 ಕೋಟಿ ರು.ಗಳಿಂದ ಶೇ. 171 ರಷ್ಟು ಏರಿಕೆಯಾಗಿದ್ದು, 1225 ಕೋಟಿ ರು.ಗಳಿಗೆ ತಲುಪಿದೆ. ಕಾಂಗ್ರೆಸ್ ಕೂಡ ಬಾಂಡ್ ಮೂಲಕ ಸಂಗ್ರಹವಾಗುವ ಪಕ್ಷದ ನಿಧಿಯಲ್ಲಿ ಶೇ.384 ರಷ್ಟು ಹೆಚ್ಚಳ ಕಂಡಿದೆ. 2023ನೇ ಸಾಲಿನಲ್ಲಿ 171 ಕೋಟಿ ಇದ್ದ ಆದಾಯ 2024 ನೇ ಸಾಲಿನಲ್ಲಿ 828.4 ಕೋಟಿ ರು.ಗೆ ಏರಿಕೆ ಕಂಡಿದೆ.
ಕರ್ಚು ಮಾಡುವಲ್ಲಿ ಕಾಂಗ್ರೆಸ್ ಮುಂದೆ: ಇನ್ನು ಚುನಾವಣೆಗಾಗಿ ತನ್ನ ಪಕ್ಷದ ನಿಧಿಯನ್ನು ಕರ್ಚು ಮಾಡುವಲ್ಲಿ ಕಾಂಗ್ರೆಸ್ ಮುಂದಿದೆ. ಅಂಕಿ-ಅAಶಗಳ ಪ್ರಕಾರ, 2022-23 ರಲ್ಲಿ ಬಿಜೆಪಿ 1361.7 ಕೋಟಿ ಚುನಾವಣಾ ಖರ್ಚು ಮಾಡಿದ್ದರೆ, 2023-24 ರಲ್ಲಿ 1754 ಕೋಟಿ ಖರ್ಚು ಮಾಡುವ ಮೂಲಕ ಶೇ. 62 ರಷ್ಟು ಹೆಚ್ಚಳವಾಗಿದೆ. ಕಾಂಗ್ರೆಸ್ 2022-23 ನೇ ಸಾಲಿನಲ್ಲಿ 467.1ಕೋಟಿ ಖರ್ಚು ಮಾಡಿದ್ದರೆ, 2023-24 ರಲ್ಲಿ 1025.2 ಕೋಟಿ ರು. ಖರ್ಚು ಮಾಡುವ ಮೂಲಕ ತನ್ನ ವಾರ್ಷಿಕ ಖರ್ಚನ್ನು ಶೇ.120 ಕ್ಕೆ ಹೆಚ್ಚಿಸಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


