ಉಪಯುಕ್ತ ಸುದ್ದಿ

ತಿಮ್ಮಪ್ಪನ ಭಕ್ತರಿಗೆ ರಾಜ್ಯ ಸರಕಾರದ ಗುಡ್ ನ್ಯೂಸ್

Share It

ತಿರುಮಲದಲ್ಲಿ 132 ಸುಸಜ್ಜಿತ ರೂಮ್‌ಗಳು ಲಭ್ಯ
ಕಡಿಮೆ ವೆಚ್ಚದಲ್ಲಿ ಐಷರಾಮಿ ವ್ಯವಸ್ಥೆ ಕಲ್ಪಿಸಿದ ಮುಜರಾಯಿ ಇಲಾಖೆ

ತಿರುಪತಿ: ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಛತ್ರದ ಐಹೊಳೆ ಬ್ಲಾಕ್‌ನ 132 ಕೊಠಡಿಗಳನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು.

ಕರ್ನಾಟಕ ಸರ್ಕಾರವು ತಿರುಮಲಕ್ಕೆ ಶ್ರೀ ವೆಂಕಟೇಶ್ವರಸ್ವಾಮಿ ದರ್ಶನಕ್ಕಾಗಿ ಭೇಟಿ ನೀಡುವ ಯಾತ್ರಾರ್ಥಿಗಳಿಗೆ 200 ಕೋಟಿ ರು. ಗಳ ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ಈಗಾಗಲೇ 110 ಕೊಠಡಿಗಳ ಬ್ಲಾಕ್-2 (ಹಂಪಿ ಬ್ಲಾಕ್) ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ.

ಎರಡನೇ ಬ್ಲಾಕ್ ಐಹೊಳೆ ಬ್ಲಾಕ್‌ನ ಉದ್ಘಾಟನೆಯು ಸೋಮವಾರ ನೆರವೇರಿದ್ದು, ಕಟ್ಟಡದಲ್ಲಿನ ಪ್ರತಿ ಕೊಠಡಿಗಳಿಗೆ 24 ಗಂಟೆಗಳ ಅವಧಿಗೆ ಕೊಠಡಿ ನಿರ್ವಹಣಾ ಶುಲ್ಕ ರೂ.1350/ ನಿಗಧಿ ಪಡಿಸಿದ್ದು, ಕಡಿಮೆ ಬೆಲೆಯಲ್ಲಿ ಸುಸಜ್ಜಿತ ಕೊಠಡಿಗಳನ್ನು ಯಾತ್ರಾರ್ಥಿಗಳಿಗೆ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ. ಇದರ ಲೋಕಾರ್ಪಣೆ ಕಾರ್ಯ ಸೋಮವಾರ ನೆರವೇರಿದ್ದು, ಭಕ್ತಾಧಿಗಳ ಉಪಯೋಗಕ್ಕೆ ಲಭ್ಯವಿದೆ.

ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಮತ್ತು ಶ್ರೀ ಕೃಷ್ಣದೇವರಾಯ ಬ್ಲಾಕ್‌ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 500 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.

ತಿರುಪತಿ ಹಾಗೂ ತಿರೂಚಾನೂರಿನಲ್ಲಿಕರ್ನಾಟಕ ರಾಜ್ಯ ಛತ್ರದಲ್ಲಿ ಹಾಲಿ ಇರುವ 24 ಕೊಠಡಿಗಳನ್ನು ಮತ್ತು ಕಲ್ಯಾಣ ಮಂಟಪಗಳನ್ನು ನವೀಕರಣಗೊಳಿಸಿ, ಯಾತ್ರಾರ್ಥಿಗಳಿಗೆ ಹಂಚಿಕೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ 50 ಸುಸಜ್ಜಿತ ಕೊಠಡಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ಸಿದ್ಧಗೊಳಿಸಲಾಗುತ್ತಿದೆ.

ಕಲ್ಯಾಣ ಮಂಟಪ ಬ್ಲಾಕ್ ಹಾಗೂ ವಿವಿಐಪಿ ಕೊಠಡಿಗಳ ಬ್ಲಾಕ್ 2025 ರ ಏಪ್ರಿಲ್ ಅಥವಾ ಮೇನಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದ್ದು, ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಂಧ್ರ ಪ್ರದೇಶದ ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ನೆರವೇರಿಸಲಾಗುವುದು.

ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ದೇವಾಲಯಗಳ ವಸತಿ ಕಾಯ್ದಿರಿಸುವಿಕೆಯ ವೆಬ್ ಸೈಟ್ Karnatakatemplesaccommodation.com ಮೂಲಕ ಶೇ.60 % ರಷ್ಟು ಆನ್‌ಲೈನ್ ಮೂಲಕ ಹಾಗೂ ಶೇ.40 % ಆಫ್‌ಲೈನ್ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಿ ಅನುಕೂಲ ಮಾಡಿಕೊಡಲಾಗುತ್ತಿದೆ.


Share It

You cannot copy content of this page