ಬೆಂಗಳೂರು: ತನಿಖೆ ವೇಳೆ ವಿವಿಧ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿದ್ದ ಜಯಲಲಿತಾ ಅವರಿಗೆ ಸೇರಿದ ಚಿನ್ನಾಭರಣ, ನಗದು ಮತ್ತು ಆಸ್ತಿಯನ್ನು ತಮಿಳುನಾಡು ಸರಕಾರಕ್ಕೆ ನೀಡುವಂತೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಫೆ. 14 ಮತ್ತು 15 ರಂದು ಈ ಪ್ರಕ್ರಿಯೆಗೆ ದಿನಾಂಕ ನಿಗದಿ ಮಾಡಿದ್ದು, ಎಲ್ಲ ಆಸ್ತಿ, ಹಣ ಮತ್ತು ಚಿನ್ನಾಭರಣವನ್ನು ತಮಿಳುನಾಡು ಸರಕಾರದ ವಶಕ್ಕೆ ನೀಡಬೇಕು ಎಂದು ಕರ್ನಾಟಕ ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆಗೆ ಸಿಬಿಐ, ಇಡಿ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.
ತನಿಖೆಗೆ ವೆಚ್ಚವಾಗಿರುವ 5 ಕೋಟಿ ರು.ಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು ತಮಿಳು ನಾಡು ಸರಕಾರ ಕರ್ನಾಟಕ ಸರಕಾರಕ್ಕೆ ಪಾವತಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚನೆ ನೀಡಿದೆ. ಈ ಪ್ರಕ್ರಿಯೆಯನ್ನು ಫೆ.14 ಮತ್ತು 15 ರಂದು ನಡೆಸುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದೆ.
ನ್ಯಾಯಾಲಯ ಕಾನೂನುಬದ್ಧ ವಾರಾಸುದಾರರ ಮನವಿಯನ್ನು ತಿರಸ್ಕರಿಸಿ, ತಮಿಳುನಾಡು ಸರಕಾರದ ವಶಕ್ಕೆ ನೀಡಲು ಸೂಚನೆ ನೀಡಿತ್ತು. ಇದನ್ನು ಪ್ರಶಸ್ನಿ, ದೀಪಕ್ ಮತ್ತು ದೀಪಾ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸುವ ಮೂಲಕ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ಹೀಗಾಗಿ, ವಿಶೇಷ ನ್ಯಾಯಾಲಯ ಆಸ್ತಿ ಹಸ್ತಾಂತರಕ್ಕೆ ದಿನಾಂಕ ನಿಗದಿ ಮಾಡಿದೆ.