ಬೆಂಗಳೂರು : ಟಾಲಿವುಡ್ ನಲ್ಲಿ ಹಿಂದೆ ನಂ.1 ನಟಿಯಾಗಿದ್ದ ಕರ್ನಾಟಕ ಮೂಲದ ಬಹುಭಾಷೆ ತಾರೆ ಸೌಂದರ್ಯಾ ಅವರು ಬೆಂಗಳೂರಿನ ಹೆಬ್ಬಾಳ ಬಳಿ 2004ರ ಏಪ್ರಿಲ್ 17ರಂದು ನಿಧನ ಹೊಂದಿದರು. ಆಗ ಅವರು ಏರಿದ್ದ ಖಾಸಗಿ ವಿಮಾನ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಹೊತ್ತಿ ಉರಿಯಿತು.
ಅವರ ಜೊತೆ ಸಹೋದರ ಅಮರನಾಥ್ ಕೂಡ ನಿಧನ ಹೊಂದಿದರು. ಈ ಘಟನೆ ನಡೆದು 21 ವರ್ಷಗಳು ಕಳೆದಿವೆ. ಈ ಪ್ರಕರಣಕ್ಜೆ ಸಂಬಂಧಿಸಿದಂತೆ ಇದೀಗ ಟಾಲಿವುಡ್ನ ಖ್ಯಾತ ನಟ, ನಿರ್ಮಾಪಕ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ಇವರ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ಈ ವಿಚಾರ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ.
ಕೌಟುಂಬಿಕ ಸಮಸ್ಯೆ ಕಾರಣದಿಂದ ಮೋಹನ್ ಬಾಬು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಅವರು ಸೌಂದರ್ಯಾ ಸಾವಿನ ಪ್ರಕರಣದಲ್ಲಿ ಸಮಸ್ಯೆ ಎದುರಿಸಿದ್ದಾರೆ. ಆಂಧ್ರಪ್ರದೇಶದ ಖಮ್ಮಾಮ್ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ಮೋಹನ್ ಬಾಬು ಕೈವಾಡ ಇದೆ ಎಂದು ದೂರಲಾಗಿದೆ. ಚಿಟ್ಟಿಮಲ್ಲು ಎಂಬುವವರು ಈ ದೂರು ನೀಡಿದ್ದಾರೆ.
‘ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಜಾಗದ ವಿಚಾರದಲ್ಲಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್ನಲ್ಲಿರುವ 6 ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ನಿರಾಕರಿಸಿದ್ದರು. ಇದರಿಂದ ಈ ಕೊಲೆ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೌಂದರ್ಯಾ ಸಾವಿನ ಬಳಿಕ ಈ ಜಾಗ ಮಾರುವಂತೆ ಅವರ ಕುಟುಂಬದವರಿಗೆ ಮೋಹನ್ ಬಾಬು ಒತ್ತಡ ಹೇರಿದ್ದಾರೆ ಎಂದು ದೂರನಲ್ಲಿ ತಿಳಿಸಲಾಗಿದೆ. ಆ ಬಳಿಕ ಮೋಹನ್ ಬಾಬು ಅಕ್ರಮವಾಗಿ ಈ ಜಾಗ ಪಡೆದು ಕೊಂಡರು ಎನ್ನಲಾಗಿದೆ. ಸದ್ಯ ದೂರು ನೀಡಿದ ಚಿಟ್ಟಿಮಲ್ಲು ತಮಗೆ ಪೊಲೀಸ್ ರಕ್ಷಣೆ ಬೇಕು?ಎಂದು ಕೋರಿದ್ದಾರೆ. ಅಲ್ಲದೆ ಈ ಜಾಗವನ್ನು ಸರ್ಕಾರ ವಶಕ್ಕೆ ಪಡೆದು ಅಗತ್ಯ ಇರುವ ವೃದ್ಧಾಶ್ರಮದವರಿಗೆ ನೀಡುವಂತೆ ಕೋರಿದ್ದಾರೆ.
ಸೌಂದರ್ಯಾ ಅವರು ಕನ್ನಡ ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅವರು ‘ಆಪ್ತಮಿತ್ರ’ ಚಿತ್ರದಲ್ಲಿ ಮಾಡಿದ ನಾಗವಲ್ಲಿ ಪಾತ್ರ ಯಾವಾಗಲೂ ನೆನಪಿನಲ್ಲಿ ಇರುವಂಥದ್ದು. ಅವರು ನಿಧನ ಹೊಂದುವಾಗ ಕೇವಲ 31 ವರ್ಷ ವಯಸ್ಸಾಗಿತ್ತು.