ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಹನಿಟ್ರ್ಯಾಪ್ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ರಾಜ್ಯದ ನಮ್ಮ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನಗಳು ಎರಡು ಬಾರಿ ನಡೆದಿವೆ. ಇದೀಗ ಮತ್ತೊಬ್ಬ ಸಚಿವರ ಮೇಲೂ ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆಸಲಾಗಿದೆ. ನಾವು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಬಗ್ಗೆ ದೂರು ಕೊಡಲು 3 ಜನ ಸಚಿವರಿಗೆ ಹೇಳಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯದ ಎಲ್ಲಾ ಪಕ್ಷಗಳ ಸಾಕಷ್ಟು ನಾಯಕರ ಮೇಲೆ ಹನಿಟ್ರ್ಯಾಪ್ ಮಾಡುವ ಯತ್ನ ನಡೆಸಲಾಗಿದೆ. ರಾಜ್ಯದ ಪ್ರಮುಖ ರಾಜಕೀಯ ನಾಯಕರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಒಂದು ತಂಡವೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ ಹನಿಟ್ರ್ಯಾಪ್ ಬಗ್ಗೆ ದೂರು ಕೊಟ್ಟರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಈಗಾಗಲೇ ಹಿಂದಿನ ಸರ್ಕಾರದ ಒಬ್ಬ ಸಚಿವರು ಇಂತಹ ಹನಿಟ್ರ್ಯಾಪ್ ನಿಂದಲೇ ರಾಜೀನಾಮೆ ನೀಡಬೇಕಾಯಿತು ಎಂದು ಸಚಿವ ಸತೀಶ್ ಜಾರಕಿಹೊಳಿ, ಪರೋಕ್ಷವಾಗಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಉಲ್ಲೇಖಿಸಿ ಮಾತನಾಡಿದರು. ಈ ಮೂಲಕ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಹನಿಟ್ರ್ಯಾಪ್ ಗೆ ಒಳಗಾಗಲಿದ್ದೀರಿ ಎಂದು ಸಚಿವ ಸತೀಶ್ ಜಾರಕಿಹೊಳಿ ಮುನ್ನೆಚ್ಚರಿಕೆ ನೀಡಿದರು.