ಬೆಂಗಳೂರು: ಮೈಕ್ರೋ ಫೈನಾನ್ಸ್ ದಂಧೆಗೆ ಒಂದು ವಾರದಲ್ಲಿ ನಾಲ್ಕು ಹೆಣಗಳು ಬಿದ್ದಿದ್ದು, ಎಚ್ಚೆತ್ತುಕೊಂಡಿರುವ ಸರಕಾರ ಇಂದು ಮಹತ್ವದ ಮೀಟಿಂಗ್ ಆಯೋಜನೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಪಾಲಿಸಿಗಳ ಕುರಿತು ಚರ್ಚೆ ನಡೆಯಲಿದೆ. ಸಾಲ ಕೊಡುವಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ನಡೆಸಿರುವ ಅಕ್ರಮದ ಕುರಿತು ತನಿಖೆ, ಸಾಲ ವಸೂಲಾತಿ ವೇಳೆ ಸಾರ್ವಜನಿಕರಿಗೆ ಕೊಡುತ್ತಿರುವ ತೊಂದರೆಗಳ ಕುರಿತು ಚರ್ಚೆ ನಡೆಯಲಿದೆ.
ಅಕ್ರಮವಾಗಿ ಬಡ್ಡಿ ವಿಧಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಸಂಸ್ಥೆಯ ಪ್ರತಿನಿಧಿಗಳ ಮೇಲೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪೊಲೀಸ್ ಅಧಿಕಾರಿಗಳಿಗೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬAಧಿಸಿದAತೆ ಕ್ರಮಕ್ಕೆ ಮಹತ್ವದ ಸೂಚನೆ ಸಿಗುವ ಸಾಧ್ಯತೆಗಳಿವೆ.
ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿನ ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಹೆಚ್ಚಾಗಿ ದೂರುಗಳು ಕೇಳಿಬರುತ್ತಿವೆ. ರಾಮನಗರದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ರಾಯಚೂರಿನ ಮಾನ್ವಿ, ತುಮಕೂರಿನ ತಿಪಟೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ರಾಯಚೂರಿನಲ್ಲಿ ಈ ಬಗ್ಗೆ ಬೃಹತ್ ಪ್ರತಿಭಟನೆಯೇ ನಡೆದಿದೆ.
ಇದಲ್ಲದೇ ನೂರಾರು ಜನ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಾಟಕ್ಕೆ ಹೆದರಿ ಗ್ರಾಮಗಳನ್ನು ತೊರೆದಿದ್ದಾರೆ. ಅವರ ಕಿರುಕುಳದಿಂದ ಕೆಲವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬೆಳಗಾವಿಯಲ್ಲಿ ಫೈನಾನ್ಸ್ ಕಂಪನಿ ಮನೆಗೆ ಬೀಗ ಹಾಕಿ ಬಾಣಂತಿ ಸಮೇತ ಕುಟುಂಬವನ್ನು ಹೊರಹಾಕಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್, ಮಾಲೀಕರಿಗೆ ಮನೆಯನ್ನು ವಾಪಸ್ ಕೊಡಿಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಮೀಟಿಂಗ್ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಯಾವ ರೀತಿಯ ತೀರ್ಮಾನಗಳು ಹೊರಬೀಳಲಿವೆ ಎಂದು ಇಡೀ ನಾಡಿನ ರೈತ ವರ್ಗ ಕಾದು ಕುಳಿತಿದೆ. ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ, ಮೈಕ್ರೋ ಫೈನಾನ್ಸ್ ಹಾವಳಿಯಿಂದ ಆಗುವ ಸಾವಿನ ಸರಣಿ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.