ಕೆ.ಆರ್.ಪೇಟೆ: ಕಲುಷಿತ ನೀರು ಸೇವನೆಯಿಂದ ಇಬ್ಬರು ವಯೋವೃದ್ಧರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕುಡಿಯುವ ನೀರಿಗೆ ತಾತ್ವಾರವಿದ್ದು, ಕಲುಷಿತ ನೀರು ಸೇವನೆ ಅನಿವಾರ್ಯವಾಗಿದೆ. ಇದರ ಪರಿಣಾಮ ನಾಲ್ಕು ದಿನಗಳ ಹಿಂದೆ ಗ್ರಾಮದ ಏಳು ಜನರು ಗಂಭೀರವಾಗಿ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರನ್ನು ಚನ್ನರಾಯಪಟ್ಟಣದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಚಿಕ್ಕಮ್ಮ (68) ಮತ್ತು ನರಸಮ್ಮ (70) ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಇರುವ ಮೂವರ ಸ್ಥಿತಿ ಕೂಡ ಗಂಭೀರವಾಗಿದೆ. ಜತೆಗೆ ಗ್ರಾಮದಲ್ಲಿ ಆಗಾಗ ಮತ್ತಷ್ಟು ಜನ ಅಸ್ವಸ್ಥರಾಗುತ್ತಲೇ ಇದ್ದಾರೆ. ಇದು ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ.
ಜಿಲ್ಲೆಯ ಗಡಿಭಾಗವಾದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಯಿದ್ದು ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.