ಸುದ್ದಿ

ದಲಿತ ಯುವಕನ ಮದುವೆ ದಿಬ್ಬಣಕ್ಕೆ 200 ಪೊಲೀಸರ ಕಣ್ಗಾವಲು

Share It

ಜೈಪುರ: ಮೇಲ್ವರ್ಗದ ವಿರೋಧದ ಕಾರಣಕ್ಕೆ ದಲಿತ ವರನೊಬ್ಬನ ಮದುವೆ ದಿಬ್ಬಣ(ಬರಾತ್) ಕಾರ್ಯಕ್ರಮ 200 ಪೊಲೀಸರ ಕಣ್ಗಾವಲಿನಲ್ಲಿ ನಡೆದಿರುವ ಪ್ರಸಂಗ ರಾಜಸ್ಥಾನದಲ್ಲಿ ಮಂಗಳವಾರ ನಡೆದಿದೆ.

ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ದಲಿತ ಕುಟುಂಬದ ವರನೊಬ್ಬನ ಮದುವೆ ಕಾರ್ಯಕ್ರಮ ನಿಶ್ಚಯವಾಗಿತ್ತು. ಇದಕ್ಕೆ ಮೇಲ್ವರ್ಗದ ವಿರೋಧ ವ್ಯಕ್ತವಾಗುವ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, 200 ಜನ ಪೊಲೀಸ್ ಸಿಬ್ಬಂದಿ ಕಣ್ಗಾವಲಿನಲ್ಲಿ ಕುದುರೆ ಸವಾರಿ ಮೆರವಣಿಗೆ ನಡೆಸಲಾಯಿತು.

ದಲಿತ ಯುವಕರ ಮದುವೆ ದಿಬ್ಬಣಕ್ಕೆ ಗ್ರಾಮದಲ್ಲಿ ಪದೇಪದೆ ವಿರೋಧ ವ್ಯಕ್ತವಾಗಿ, ಗಲಾಟೆಗಳು ಸಂಭವಿಸುವ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾನವ ಹಕ್ಕಗಳ ಆಯೋಗಕ್ಕೆ ವರನ ಕುಟುಂಬ ಮನವಿ ಸಲ್ಲಿಸಿತ್ತು. ಹೀಗಾಗಿ, ಸ್ಥಳೀಯ ಪೊಲೀಸರು 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದರು.

ಖೋರ್ವಾಲ್‌ನ ಲಾವೆರಾ ಗ್ರಾಮದ ಅರುಣಾ ಎಂಬ ಯುವತಿಯ ಜತೆಗೆ ವಿಜಯ್ ರೇಗರ್ ಎಂಬುವರ ಜೊತೆ ವಿವಾಹ ನಡೆದಿದೆ. ಇದಕ್ಕೂ ಮೊದಲು ವರ, ವಧುವಿನ ಊರಿಗೆ ಕುದುರೆ ಸವಾರಿಯಲ್ಲಿ ತೆರಳುವ ಬಿಂದೋಲಿ ನಡೆಸಲು ಇಚ್ಛಿಸಿದ್ದ. ಆದರೆ, ಗ್ರಾಮದ ಮೇಲ್ಜಾತಿಯವರಿಂದ ವಿರೋಧದ ಸಾಧ್ಯತೆಯ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರು.

ಈ ಕುರಿತು ಗ್ರಾಮಸ್ಥರ ಜೊತೆಗೂ ಚರ್ಚೆ ನಡೆಸಲಾಯಿತು. ಜನರು ಕೂಡ ಸಹಕರಿಸುವ ಭರವಸೆ ನೀಡಿದ್ದರು. ಮೆರವಣಿಗೆಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರು ಡಾ. ಅಂಬೇಡ್ಕರ್ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವರನ ಮೆರವಣಿಗೆಯನ್ನು ಪೊಲೀಸ್ ರಕ್ಷಣೆಯಲ್ಲಿ ನಡೆಸಲಾಗಿದೆ.


Share It

You cannot copy content of this page