ಇನ್ಸ್ಯೂರೆನ್ಸ್ ಹಣಕ್ಕಾಗಿ ಸತ್ತಂತೆ ನಾಟಕ: ಅಮಾಯಕನ ಕೊಂದು ಸಂಸ್ಕಾರ ಮಾಡಿದ್ದ ಹೊಸಕೋಟೆ ದಂಪತಿ
ಹಾಸನ: ಇನ್ಸ್ಯೂರೆನ್ಸ್ ಪಾಲಿಸಿ ಹಣ ಪಡೆಯುವ ದುರುದ್ದೇಶದಿಂದ ಗಂಡನ ಹೋಲಿಕೆಯ ವ್ಯಕ್ತಿಯನ್ನು ಶವಸಂಸ್ಕಾರ ಮಾಡಿದ್ದ ಘಟನೆ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡಸಿ ಹೋಬಳಿಯ ಗೊಲ್ಲರಹೊಸಹಳ್ಳಿ ಗ್ರಾಮದ ಬಳಿ ಪಂಚರ್ ಆಗಿದ್ದ ಕಾರಿನ ಟೈರ್ ಬದಲಾಯಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಗಂಡಸಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು.
ಹಾಸನ ಜಿಲ್ಲಾಸ್ಪತ್ರೆಗೆ ಆಗಮಿಸಿದ ಶಿಲ್ಪರಾಣಿ ಎಂಬ ಮಹಿಳೆ ಆತ ತನ್ನ ಗಂಡ ಮುನಿಸ್ವಾಮಿ ಗೌಡ ಎಂದು ಗುರುತುಹಿಡಿದು ಶವ ಪಡೆದು, ಹೊಸಕೋಟೆಯ ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಘಟನೆ ನಡೆದು ಹತ್ತು ದಿನದ ನಂತರ ಇಡೀ ಪ್ರಕರಣ ಬೇರೆಯದ್ದೇ ಟ್ವಿಸ್ಟ್ ಪಡೆದಿದೆ.
ಹೊಸಕೋಟೆ ಮೂಲದ ಮುನಿಸ್ವಾಮೀಗೌಡ ಮತ್ತು ಶಿಲ್ಪರಾಣಿ ಆರ್ಥಿಕ ಸಂಕಷ್ಟದಲ್ಲಿದ್ದರು. ಹೀಗಾಗಿ, ಮುನಿಸ್ವಾಮಿ ಗೌಡ ಹೆಸರಿನಲ್ಲಿದ್ದ ಎಲ್ ಐಸಿ ಹಣ ಪಡೆದುಕೊಳ್ಳಲು ಸ್ಕೆಚ್ ಹಾಕಿದ್ದರು. ಅದಕ್ಕಾಗಿ, ತನ್ನನ್ನೇ ಹೋಲುವ ಬಿಕ್ಷುಕನೊಬ್ಬನನ್ನು ಪುಸಲಾಯಿಸಿ ಕರೆಯಂದು, ಪಂಚರ್ ನೆಪದಲ್ಲಿ ಆತನನ್ನು ಕೆಳಗಿಳಿಸಿ, ಮೊದಲೇ ನಿಗದಿಯಂತೆ ಲಾರಿಯಲ್ಲಿ ಗುದ್ದಿಸಿದ್ದರು
ಘಟನೆ ನಂತರ ಮುನಿಸ್ವಾಮಿಗೌಡ ತಲೆ ಮರೆಸಿಕೊಂಡಿದ್ದು, ಬಿಕ್ಷುಕನ ಶವವನ್ನು ಗಂಡನ ಶವ ಎಂದು ಪಡೆದಿದ್ದ, ಶಿಲ್ಪರಾಣಿ ಶವಸಂಸ್ಕಾರ ನಡೆಸಿ, ವಿಮೆಯ ಹಣ ಪಡೆಯಲು ತಯಾರಿ ನಡೆಸಿದ್ದರು. ಆದರೆ, ತಲೆಮರೆಸಿಕೊಂಡಿದ್ದ ಮುನಿಸ್ವಾಮಿಗೌಡ ಪಾಪಪ್ರಜ್ಞೆಯಿಂದ ತಮ್ಮ ಸಂಬಂಧಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರ ಮುಂದೆ ಬಂದು ಸತ್ಯ ಬಾಯ್ಬಿಟ್ಟಿದ್ದಾರೆ.
ಮುನಿಸ್ವಾಮಿ ಗೌಡನ ಕಂಡು ಶಾಕ್ ಆದ ಇನ್ಸ್ಪೆಕ್ಟರ್: ಮುನಿಸ್ವಾಮಿಗೌಡ ಶವಸಂಸ್ಕಾರಕ್ಕೆ ಹೋಗಿ, ಕಾರ್ಯವನ್ನೆಲ್ಲ ಮುಗಿಸಿ ಬಂದಿದ್ದ ಸಂಬಂಧಿಕರು ಆದ ಪೊಲೀಸ್ ಇನ್ಸ್ಪೆಕ್ಟರ್ ಮುಂದೆ ಆತನ ಬರುತ್ತಿದ್ದಂತೆ ಶಾಕ್ ಆಗಿದ್ದಾರೆ. ಈತನ ಹೇಳಿಕೆ ಗಮನಿಸಿ, ಆತನನ್ನು ಗಂಡಸಿ ಪೊಲೀಸ್ ಠಾಣೆಗೆ ಕಳುಹಿಸಿ, ವಿಚಾರಗೆ ಒಪ್ಪಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಇದು ತಾನು, ತನ್ನ ಪತ್ನಿ ಸೇರಿ ಮಾಡಿದ್ಧ ಸಂಚು ಎಂದು ಆತ ಒಪ್ಪಿಕೊಂಡಿದ್ದಾನೆ.
ಮಳ್ಳಿಯಂತಿದ್ದ ಮಡದಿ: ಈ ನಡುವೆ ಗಂಡನ ಶವ ಎಂದು ಮತ್ಯಾರದ್ದೋ ಶವವನ್ನು ಸಂಸ್ಕಾರ ಮಾಡಿ, ಮನೆಯಲ್ಲಿದ್ದ ಮಡದಿ, ತನಗೇನೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಿದ್ದಳು. ಗಂಡನ ಹೇಳಿಕೆ ನಂತರ ಆಕೆಯನ್ನು ವಿಚಾರಿಸಿದಾಗಲೂ, ತಾನು ಅಮಾಯಕಿಯಂತೆ ನಟಿಸಿದ್ದು, ಪೊಲೀಸರ ವಿಚಾರಣೆ ನಂತರ ಇದು ತಾನು ಹಾಗೂ ಪತಿ ರೂಪಿಸಿದ್ದ ಸಂಚು ಎಂದು ಒಪ್ಪಿಕೊಂಡಿದ್ದಾಳೆ. ಇದೀಗ ಸತ್ತ ವ್ಯಕ್ತಿ ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಕೊಲೆಗೆ ಸಹಕಾರ ನೀಡಿದ ಲಾರಿ ಚಾಲಕನ ಹುಡುಕಾಟ ನಡೆಸಿದ್ದಾರೆ.