ದೆಹಲಿಯಿಂದ ಸಿದ್ದು ವಾಪಸ್, ದೆಹಲಿಯಲ್ಲೇ ಉಳಿದ ಡಿ.ಕೆ: ರಾಜ್ಯ ಕಾಂಗ್ರೆಸ್ ಬೆಳವಣಿಗೆ ನಿಗೂಢ !
ಹೊಸದಿಲ್ಲಿ: ಕರ್ನಾಟಕ ರಾಜಕೀಯ ಬದಲಾವಣೆಯ ಬೆಳವಣಿಗೆಗಳಿಗೆ ಪುಷ್ಟಿ ನೀಡುವಂತಹ ಸನ್ನಿವೇಶಗಳು ಕೂಡ ಕಣ್ಣಮುಂದೆಯೇ ಗೋಚರಿಸುತ್ತಿವೆ. ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಗೃಹ ಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೈಕಮಾಂಡ್ ನಾಯಕರ ಭೇಟಿಯಾಗಿದ್ದಾರೆ.
ಆದರೆ, ಸಭೆ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತ್ರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಡಿಸಿಎಂ ಡಿ.ಕೆ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಇಂದು ಸಂಜೆ ಮತ್ತೆ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ನಂತರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇದರ ಮಧ್ಯೆ ಕೆ.ಸಿ ವೇಣುಗೋಪಾಲ್‌ರನ್ನ ಭೇಟಿಯಾದ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಮನೆಯಲ್ಲಿ ಬೀಸಿರುವ ಬದಲಾವಣೆ ಬಿರುಗಾಳಿಗೆ ಸಾಕ್ಷ್ಯದಂತಿವೆ.
5ರಿಂದ 6 ಸಚಿವರಿಗೆ ಸಂಪುಟದಿಂದ ಕೊಕ್?!
ಕಾಂಗ್ರೆಸ್ ಹೈಕಮಾಂಡ್ ಮೀಟಿಂಗ್‌ನಲ್ಲಿ ಸಂಪುಟ ಪುನಾರಚನೆ ಬಗ್ಗೆಯೂ ಪ್ರಸ್ತಾಪವಾಗಿದೆ. ಸಂಪುಟದಿಂದ ಕೆಲ ಸಚಿವರನ್ನ ಕೈಬಿಡುವ ಬಗ್ಗೆ ಚರ್ಚೆಯಾಗಿದ್ದು, ಈ ಬಗ್ಗೆ ಚರ್ಚಿಸಲು ಮತ್ತೆ ದೆಹಲಿಗೆ ಬರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2 ತಿಂಗಳ ಬಳಿಕ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದ್ದು, 5ರಿಂದ 6 ಸಚಿವರನ್ನ ಸಂಪುಟದಿಂದ ಕೈಬಿಡುವ ಚಿಂತನೆ ಇದೆಯಂತೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಆಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಉರುಳಾಗಿ ಪರಿಣಮಿಸಿದೆ. ಹೈಕಮಾಂಡ್‌ನಿಂದ ಅಭಯ ಸಿಕ್ಕಿತೋ? ಅಥವಾ ನಿನ್ನೆ ಶುಕ್ರವಾರದ ಸಭೆಯ ಬಳಿಕ ಸಿಎಂ ಬದಲಾವಣೆ ಭಯ ಶುರುವಾಯಿತೋ? ಎಂಬ ಪ್ರಶ್ನೆ ಉದ್ಭವಿಸಿದೆ.