ಬೆಂಗಳೂರು: ಎಚ್.ರೇವಣ್ಣ ಮನೆಕೆಲಸದಾಕೆ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಆಕೆಯ ಅಪಹರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಮತ್ತು ಆಕೆಯನ್ನು ಅಪಹರಿಸಿ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎಚ್.ಡಿ.ರೇವಣ್ಣನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತ್ತು. ಈ ನಡುವೆ ಜನಪ್ರತಿನಿಧಿಗಳ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಸೆಷನ್ಸ್ ನ್ಯಾಯಾಲಯದ ಜಾಮೀನು ರದ್ದುಗೊಳಿಸಲು ಕೋರಿ ಎಸ್ಐಟಿ ಹೈಕೋರ್ಟ್ ಮುಂದೆ ಮನವಿ ನಾಡಿತ್ತು. ಹೈಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತ್ತು. ಎಸ್ಐಟಿ ಪರ ವಕೀಲರು ರೇವಣ್ಣ ಜಾಮೀನು ರದ್ದುಗೊಳಿಸಲು ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಪ್ರಕರಣದ ತೀರ್ಪು ಹೊರಬೀಳಲಿದ್ದು, ಜಾಮೀನು ರದ್ದುಗೊಳಿಸುವ ಆದೇಶವೇನಾದರೂ ಪ್ರಕಟವಾದರೆ, ಮತ್ತೇ ರೇವಣ್ಣ ಜೈಲು ಸೇರಬೇಕಾಗುತ್ತದೆ. ಹೀಗಾಗಿ, ಇಂದಿನ ಆದೇಶ ರೇವಣ್ಣ ಮತ್ತು ಅವರ ಕುಟುಂಬಕ್ಕೆ ಮಹತ್ವದ್ದಾಗಿದೆ.