ರಾಜಕೀಯ ಸುದ್ದಿ

ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್-ಬಿಜೆಪಿ ಭಿನ್ನಮತ, ಯೋಗೇಶ್ವರ್ ಪರ ವಿಜಯೇಂದ್ರ ಬ್ಯಾಟಿಂಗ್

Share It

ರಾಮನಗರ : ರೇಷ್ಮೆನಾಡು ಚನ್ನಪಟ್ಟಣದಲ್ಲಿ ಉಪಚುನಾವಣೆಯ ಕಾದಾಟ ಕಿಚ್ಚು ಹಚ್ಚಿದೆ. ಸಿಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅತ್ತ ಟಿಕೆಟ್ ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್‌ ಕಸರತ್ತು ನಡೆಸುತ್ತಿದೆ. ಅದಕ್ಕೆ ಸಾಕ್ಷಿಯೆಂಬಂತೆ ದಿನಾಂಕ ಘೋಷಣೆಗೂ ಮುನ್ನವೇ ಮ್ಯಾರಥಾನ್ ಮೀಟಿಂಗ್​ಗಳು ನಡೆಯುತ್ತಿವೆ. ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಕೋರಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಯಿತು. ಸಭೆಯಲ್ಲಿ, ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಯಿತು.

ಮಂಡ್ಯ ಬಿಟ್ಟು ಕೊಟ್ಟಿರಲಿಲ್ವಾ: ಪ್ರಶಾಂತ್ ​​​​​ಗೌಡ ಪ್ರಶ್ನೆ
ಮಂಡ್ಯವನ್ನು ನಾವು ಜೆಡಿಎಸ್​​ಗೆ ಬಿಟ್ಟುಕೊಟ್ಟಿರಲಿಲ್ಲವೇ? ಅದೇ ರೀತಿ ಈಗ ಚನ್ನಪಟ್ಟಣದಲ್ಲಿ ನಮ್ಮ ಪಕ್ಷದವರಿಗೆ ಟಿಕೆಟ್ ನೀಡಲಿ ಎಂದು ಬಿಜೆಪಿ ಮುಖಂಡ ಪ್ರಶಾಂತ್ ​​​​​ಗೌಡ ಆಗ್ರಹಿಸಿದರು.

ಕನಕಪುರದಲ್ಲಿ ಕುಮಾರಸ್ವಾಮಿ ಸಭೆ
ಒಂದೆಡೆ, ಬಿಜೆಪಿ ಸಭೆಗಳನ್ನು ಮಾಡುತ್ತಿದ್ದರೆ ಕನಕಪುರ ತಾಲೂಕಿನ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಸಭೆ ಕೂಡ ನಡೆಯಿತು. ಕಾರ್ಯಕರ್ತರು, ಮುಖಂಡರ ಜೊತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸಭೆ ನಡೆಸಿದರು. ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಸೂಕ್ತ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಪಡೆದೇ ತೀರ್ಮಾನಿಸಲಾಗುತ್ತದೆ ಎಂದರು.

ಇನ್ನೊಂದೆಡೆ ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಹಿಡಿತ ಇದೆ. ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿರುವುದು ತಪ್ಪಲ್ಲ ಎಂದರು.

ಒಟ್ಟಿನಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಆಗುವ ಮುನ್ನವೇ ದೋಸ್ತಿಗಳ ನಡುವೆ ಚನ್ನಪಟ್ಟಣ ಟಿಕೆಟ್ ಫೈಟ್ ತಾರಕಕ್ಕೇರಿದೆ.


Share It

You cannot copy content of this page