ಗ್ಯಾರಂಟಿ ಕಚೇರಿ ಸ್ಥಾಪಿಸಿ ಫಲಾನುಭವಿಗಳ ಪಟ್ಟಿ ಪ್ರಕಟಿಸಲು ಸೂಚನೆ
ಬೆಂಗಳೂರು: ಎಲ್ಲಾ 28 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಚೇರಿಗಳನ್ನು ಸ್ಥಾಪಿಸಿ ಆಯಾ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಸೂಚಿಸಿದ್ದಾರೆ.
ಬಿಬಿಎಂಪಿಯ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಕುಂದು ಕೊರತೆಗಳ ಕುರಿತು ಜಿಲ್ಲಾ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರವಾರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿ ತೆರೆದು ಪ್ರತಿ ತಿಂಗಳು ಯೋಜನೆ ಸದುಪಯೋಗ ಪಡೆದುಕೊಂಡ ಫಲಾನುಭವಿಗಳ ಪಟ್ಟಿ ಪ್ರಕಟಿಸುವಂತೆ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಕೃಷ್ಣಪ್ಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಜನಾರ್ಧನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿತರಿದ್ದರು.


