ಸುದ್ದಿ

ಅಪ್ರಾಪ್ತೆಯ ಅತ್ಯಾಚಾರ : ಅತ್ಯಾಚಾರಿಗೆ 20 ವರ್ಷದ ಕಠಿಣ ಶಿಕ್ಷೆ

Share It

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಕೊಲ್ಲಾಪುರಕ್ಕೆ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಆರೋಪಿಗೆ ಇದೀಗ ಬೆಳಗಾವಿ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದೆ.

ಚಿಕ್ಕೋಡಿ ತಾಲೂಕಿನ ಕುರ್ಲಿ ಗ್ರಾಮದ ಎಸ್.ಕೆ.ನಿಕಾಡೆ (24) ಶಿಕ್ಷೆಗೆ ಗುರಿಯಾದವ. ಈತ 2016ರ ಜುಲೈ 14ರಂದು ಬಾಲಕಿಯನ್ನು ಕೊಲ್ಲಾಪುರಕ್ಕೆ ಅಪಹರಿಸಿಕೊಂಡು ಹೋಗಿದ್ದ. ಅಲ್ಲಿಂದ ಪುಣೆಗೆ ತೆರಳಿದ್ದ.

ನಂತರ ಕೊಲ್ಲಾಪುರ ಜಿಲ್ಲೆ ಕರವೀರ ತಾಲೂಕಿನ ಅಡೂರ ಗ್ರಾಮಕ್ಕೆ ಕರೆತಂದು ಬಾಡಿಗೆ ಮನೆ ಪಡೆದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಬಾಲಕಿ ತಂದೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ತನಿಖಾಧಿಕಾರಿ ಕಿಶೋರ ಭರಣಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.

ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ತೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಪಡೆಯುವಂತೆ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದಿಸಿದ್ದರು.


Share It

You cannot copy content of this page