1993 ರಲ್ಲಿ ಅಪಹರಣಕ್ಕೊಳಗಾಗಿದ್ದ ವ್ಯಕ್ತಿ 30 ವರ್ಷದ ನಂತರ ಮರಳಿ ಮನೆಗೆ ಬಂದದ್ದೇ ರೋಚಕ ಕಥಾನಕ
ಹೊಸದಿಲ್ಲಿ: ಮೂವತ್ತು ವರ್ಷದ ಹಿಂದೆ ಅಪಹರಣಕ್ಕೆ ಒಳಗಾಹಿದ್ದ ವ್ಯಕ್ತಿಯೊಬ್ಬ ಮರಳಿ ತನ್ನ ಮನೆಗೆ ಸೇರಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಸಾಹಿಬಾಬಾದ್ ನಲ್ಲಿ ನಡೆದಿದೆ.
ರಾಜು ಎಂಬ ವ್ಯಕ್ತಿ ಸೆ. 8, 1993 ರಲ್ಲಿ ತನ್ನ ಸಹೋದರಿಯೊಂದಿಗೆ ಶಾಲೆಯಿಂದ ಮರಳುವಾಗ ಅಪರಿಚಿತರಿಂದ ಅಪಹರಣಕ್ಕೊಳಗಾಗಿದ್ದರು. ಆಗ ಆತನಿಗೆ 7 ವರ್ಷ ವಯಸ್ಸಾಗಿತ್ತು. ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರಾದರೂ ಆತನ ಸುಳಿವು ಸಿಕ್ಕಿರಲಿಲ್ಲ. ಮಗನನ್ನು ಕಳೆದುಕೊಂಡ ಪೋಷಕರು 30 ವರ್ಷ ಆತನನ್ನು ಇನ್ನೇನು ಮರೆತೇಬಿಟ್ಟಿದ್ದರು.
ಆದರೆ, ರಾಜು ಇದೀಗ ಪೋಷಕರ ಮುಂದೆ ಪ್ರತ್ಯಕ್ಷವಾಗಿದ್ದು, ಪೋಷಕರು ಸಂತಸದಿಂದಿದ್ದಾರೆ. ಆದರೆ, ರಾಜು ಕಳೆದ ಮೂವತ್ತು ವರ್ಷಗಳ ತನ್ನ ಅನುಭವವನ್ನು ಬಿಚ್ಚಿಟ್ಟಿದ್ದು, ಅದೊಂದು ರೋಚಕ ಥ್ರಿಲ್ಲರ್ ಕತೆಯಂತಿದೆ.
ಅಪಹರಣಕಾರರು ಆತನನ್ನು ರಾಜಸ್ಥಾನಕ್ಕೆ ಕರೆದೊಯ್ದು, ಅಲ್ಲಿ ಆತನನ್ನು ಕೆಲಸ ಮಾಡುವಂತೆ ನಿತ್ಯವೂ ಥಳಿಸುತ್ತಿದ್ದರು. ಒಂದು ದಿನಕ್ಕೆ ಒಂದೇ ರೊಟ್ಟಿ ಕೊಡುತ್ತಿದ್ದರು ಎನ್ನಲಾಗಿದೆ. ಅವರಿಂದ ತಪ್ಪಿಸಿಕೊಂಡು ದೆಹಲಿ ತಲುಪಿದ್ದ ರಾಜು, ಮೂವತ್ತು ವರ್ಷದ ನಂತರ ತನ್ನ ಹುಟ್ಟೂರಿಗೆ ಬಂದಿದ್ದಾನೆ.
ಅಪಹರಣಕಾರರ ಮನೆಯಲ್ಲಿದ್ದ ಹುಡುಗಿಯೊಬ್ಬಳು ಆತನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದಳು ಎಂದು ರಾಜು ಹೇಳಿದ್ದಾನೆ. ಜತೆಗೆ ಆಕೆ ತನಗೆ ಆಂಜನೇಯನನ್ನು ಬೇಡಿಕೊಳ್ಳುವಂತೆ ಸಲಹೆ ನೀಡಿದ್ದಳು. ಆಕೆಯ ಸಲಹೆಯಂತೆ ತಾನು ದೆಹಲಿಗೆ ಬಂದಿದ್ದಾಗಿ ಹೇಳಿಕೊಂಡಿದ್ದಾನೆ.
ದೆಹಲಿಗೆ ತಲುಪಿದ ನಂತರ ಆತನಿಗೆ ತನ್ನ ಪಟ್ಟಣದ ಹೆಸರಷ್ಟೇ ನೆನಪಿತ್ತು. ತಂದೆ ತಾಯಿಯ ಹೆಸರನ್ನು ಆತಮ ಮರೆತಿದ್ದ ಎನ್ನಲಾಗಿದೆ. ದೆಹಲಿಯಲ್ಲಿ ಅನೇಕ ಪೊಲೀಸ್ ಠಾಣೆಯಲ್ಲಿ ಸಹಾಯ ಕೇಳಿದರೂ ಸಹಾಯ ಸಿಕ್ಕಿರಲಿಲ್ಲ. ಆದರೆ, ಘಾಜಿಯಾಬಾದ್ ನಗರದ ಖೋಡಾ ಪೊಲೀಸ್ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದಾರೆ.
ಆತನಿಗೆ ಪೋಷಕರ ಪತ್ತೆಹಚ್ಚಲು ಸಹಾಯ ಮಾಡಿದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಆತನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದನ್ನು ಗುರುತಿಸಿದ ರಾಜು ಅವರ ಚಿಕ್ಕಪ್ಪ, ಕುಟುಂಬಕ್ಕೆ ಮಾಹಿತಿ ನೀಡಿ ಅನಂತರ ರಾಜುವನ್ನು ಮನೆಗೆ ಕರೆದೊಯ್ದಿದ್ದಾರೆ.


