ಬೆಂಗಳೂರು: ನಗರದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ಅವಾಂತರ ಸೃಷ್ಟಿಸಿದೆ.
ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆ ಗುಡುಗು ಸಹಿತ ಮಳೆಯಾಗಿದೆ. ಮೆಜೆಸ್ಟಿಕ್ ಬಳಿಯ ಓಕಳಿಪುರಂ ಅಂಡರ್ಪಾಸ್ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಅಂಡರ್ಪಾಸ್ನ ನೀರಿನಲ್ಲಿ ಆಟೋ, ಕಾರು ಸಿಲುಕಿದ ಪರಿಣಾಮ ಓಕಳಿಪುರಂ ಅಂಡರ್ಪಾಸ್ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಬ್ಯಾಟರಾಯನಪುರ ಬಳಿ ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನ ಸಮೀಪ ಭಾರಿ ಮಳೆಗೆ ರಾಜಕಾಲುವೆ ನೀರು ಉಕ್ಕಿ ಹರಿದಿದೆ. ಬಡಾವಣೆಯ ಹಲವು ಮನೆಗಳಿಗೆ 2 ಅಡಿಯಷ್ಟು ನೀರು ನುಗ್ಗಿ ನಿವಾಸಿಗಳು ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.
ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲೂ ಸಾಲು ಸಾಲು ಸಮಸ್ಯೆ ಎಸುರಾಗಿದೆ. ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ವಾಹನಗಳು ತೇಲಿಕೊಂಡು ಹೋಗುವಷ್ಟು ರಭಸವಾಗಿ ನೀರು ಹರಿದಿದೆ. ಕೆಂಗೇರಿ ರೈಲ್ವೆ ನಿಲ್ದಾಣಕ್ಕೆ ನೀರು ನುಗ್ಗಿದರ ಪರಿಣಾಮ ಹೊಳೆಯಂತೆ ಬದಲಾಗಿತ್ತು.
ಭಾನುವಾರ ರಾತ್ರಿ ಮಲ್ಲೇಶ್ವರಂನಲ್ಲಿ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಮರವೊಂದು ಉರುಳಿ ಆಲ್ಟೋ ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಬೆಂಗಳೂರು ಉತ್ತರ ತಾಲೂಕಿನ ತೋಟಗೆರೆ ಗ್ರಾಮದ ಬಳಿ ರಸ್ತೆ ಮಧ್ಯವೇ ಭಾರಿ ಮರ ಧರಾಶಾಯಿಯಾಗಿ, ಹೆಸರಘಟ್ಟ-ಗೊಲ್ಲಹಳ್ಳಿ ಮಾರ್ಗಮಧ್ಯೆ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ತಡರಾತ್ರಿವರೆಗೂ ಸುರಿದ ಜಡಿಮಳೆಯಿಂದ ಹಲವೆಡೆ ಟ್ರಾಪಿಕ್ ಜಾಮ್ ಉಂಟಾಗಿತ್ತು. ದಾಸನಪುರದ ರಸ್ತೆಯಲ್ಲಿ 4 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಶಾಲೆಗಳಿಗೆ ಇಂದು ರಜೆ: ಸುರಿಯುತ್ತಿರುವ ಮಳೆಯಿಂದ ನಗರದ ಎಲ್ಲ ಶಾಲೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ರಜೆ ಘೋಷಣೆ ಮಾಡಿದ್ದಾರೆ.
ಶಿಥಿಲ ಕಟ್ಟಡದಲ್ಲಿ ಪಾಠ ಪ್ರವಚನ ಮಾಡುವಂತಿಲ್ಲ:
ಕಾಲೇಜುಗಳ ಕಟ್ಟಡಗಳು ದುರ್ಬಲವಾಗಿದ್ದಲ್ಲಿ, ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ನೀಡಿದ್ದರಿಂದ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸಲು ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳ ಪೋಷಕರು, ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಷ್ಟೇಷ್ಟು ಮಳೆ: ಬೆಂಗಳೂರಿನಲ್ಲಿ 17.7 ಮಿಲಿ ಮೀಟರ್ ಮಳೆಯಾಗಿದೆ. ಹೆಚ್ಎಎಲ್ ಏರ್ಪೋರ್ಟ್ ವ್ಯಾಪ್ತಿಯಲ್ಲಿ 10.8 ಮಿಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಮಿಮೀ, ಬಾಗಲಗುಂಟೆ 5.4 ಮಿಮೀ, ಶೆಟ್ಟಿಹಳ್ಳಿ 4.2 ಮಿಮೀ, ನಂದಿನಿ ಲೇಔಟ್ 3.3 ಮಿಮೀ, ಹೇರೋಹಳ್ಳಿ 2.9 ಮಿಮೀ, ಕೆಂಗೇರಿ ವ್ಯಾಪ್ತಿಯಲ್ಲಿ 2.1 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.