ದುಬೈ: ನಿರೀಕ್ಷೆಯಂತೆಯೇ ಟೀಂ ಇಂಡಿಯಾ ಕೊನೆಗೂ ತನ್ನ ಕ್ರಿಕೆಟ್ ಅಭಿಮಾನಿಗಳನ್ನು ನಿರಾಶೆಗೊಳಿಸದಂತೆ ಚಾಂಪಿಯನ್ಸ್ ಟ್ರೋಫಿ-2025 ರ ಫೈನಲ್ ನಲ್ಲಿ ಬಹಳ ಎಚ್ಚರಿಕೆಯಿಂದ ಆಡಿ ಪ್ರಬಲ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿದೆ.
ದುಬೈನ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಹಗಲು-ರಾತ್ರಿ ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಅರಸಿಕೊಂಡು ಎಚ್ಚರಿಕೆಯಿಂದ ಬ್ಯಾಟ್ ಮಾಡಿ ಕೊನೆಗೆ ಕೊಂಚ ಬಿರುಸಾದ ಬ್ಯಾಟಿಂಗ್ ಮಾಡಿ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆ ಹಾಕಿತು.
ಇದು ಟೀಂ ಇಂಡಿಯಾಕ್ಕೆ ಆರಂಭದಲ್ಲಿ ಸಾಧಾರಣ ಮೊತ್ತ ಎನಿಸಿದರೂ ಬಳಿಕ ಟಾರ್ಗೆಟ್ ತುಸು ಕಷ್ಟಕರವಾಗುತ್ತಾ ಸಾಗಿತು. ಏಕೆಂದರೆ ಓಪನರ್ ಶುಭ್ ಮಾನ್ ಗಿಲ್ 36 ರನ್, ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟಾದ ನಂತರ ನಾಯಕ ಮತ್ತೊಬ್ಬ ಓಪನರ್ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಮತ್ತು ಕಡೆಯಲ್ಲಿ ರಕ್ಷಣಾತ್ಮಕ ಆಟಕ್ಕೆ ಶರಣಾಗಿ ಅಮೂಲ್ಯ 76 ರನ್ (83 ಎಸೆತ, 7 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.
ಆಗ ಭಾರತ ಗೆಲುವು ಗಳಿಸಲು ತಿಣಕಾಡಿತು. ಪರಿಣಾಮ ರನ್ ರೇಟ್ ಕಡಿಮೆಯಾಗಿ ಕೊನೆಯಲ್ಲಿ ಪ್ರತಿ ಎಸೆತಗಳಲ್ಲಿ ಹೆಚ್ಚಿನ ರನ್ ಗಳಿಸಬೇಕಾದ ಪರಿಸ್ಥಿತಿ ಎದುರಿಸಿತು. ತದನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 48 ರನ್ ಹಾಗೂ ಅಕ್ಸರ್ ಪಟೇಲ್ 29 ರನ್ ಗಳಿಸಿ ಔಟಾದರು.
ಇಷ್ಟಾದರೂ ಕರ್ನಾಟಕದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 34 ರನ್ (33 ಎಸೆತ, 1 ಬೌಂಡರಿ, 1 ಸಿಕ್ಸರ್) ಬಾರಿಸಿ ಭಾರತಕ್ಕೆ ಗೆಲುವು ತಂದರು. ಈ ಮೂಲಕ ಭಾರತ 2ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾದ್ಯವಾಯಿತು.
ಕೊನೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಸಮಯೋಚಿತ 76 ರನ್ ಹೊಡೆದಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಜೊತೆಗೆ ಭಾರತ ಪರವಾಗಿ ಕಡೆಯಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಚಾಂಪಿಯನ್ಸ್ ಟ್ರೋಫಿ-2025 ಪಡೆದಾಗ ದುಬೈ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ ಭಾರಿ ಚಪ್ಪಾಳೆ, ಶಿಳ್ಳೆ ಪಟಾಕಿ ಶಬ್ದ ಭೋರ್ಗರೆಯಿತು.
ಇದೇ ವೇಳೆ ಪಂದ್ಯಾವಳಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನ್ಯೂಜಿಲೆಂಡ್ ತಂಡದ ಆಲ್ ರೌಂಡರ್ ರಚಿನ್ ರವೀಂದ್ರ ( ಕರ್ನಾಟಕ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ) ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಭಾರತ 2000 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಶೆಗೊಳಗಾಗಿತ್ತು. ಬಳಿಕ 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಧೋನಿ ನಾಯಕತ್ವದ ಟೀಂ ಇಂಡಿಯಾ ಆಗ ಮೊದಲ ಬಾರಿಗೆ ಚಾಂಪಿಯನ್ ಆಗಿ ಟ್ರೋಫಿ ಎತ್ತಿಹಿಡಿದಿತ್ತು.
ಇದಾದ ನಂತರ 2017 ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಫೈನಲ್ ನಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಸೋತು ಟೀಂ ಇಂಡಿಯಾ ಮುಖಭಂಗ ಅನುಭವಿಸಿತ್ತು.
ಚಾಂಪಿಯನ್ಸ್ ಟ್ರೋಫಿ-2025 ಹಿನ್ನೆಲೆ…
2017 ರ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಯ ಫೈನಲ್ ನಲ್ಲಿ ಪಾಕಿಸ್ತಾನ ಭಾರತ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಮೆರೆದಾಡಿತ್ತು. ಇದೇ ಸವಿನೆನಪಿನಲ್ಲಿ ಕೊರೊನಾ ವೈರಸ್ ಕರಿನೆರಳು ಮುಗಿದ ಹಿನ್ನೆಲೆ ಮತ್ತೆ ಪಾಕಿಸ್ತಾನ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ-2025 ಪಂದ್ಯಾವಳಿಯನ್ನು ಆಯೋಜಿಸಿತ್ತು.
ಆದರೆ ಭದ್ರತಾ ಕಾರಣಗಳಿಂದ ಭಾರತ ಈ ಬಾರಿ ಲೀಗ್ ಪಂದ್ಯಗಳು, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಡುವುದಾಗಿ ಕಂಡೀಶನ್ ಹಾಕಿತ್ತು. ಪರಿಣಾಮ ಯುಎಇ ದೇಶದ ದುಬೈನಲ್ಲೇ ಭಾರತ ಆಡಿದ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯಗಳು, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಆಡಿಸಲಾಗಿದೆ.
ಮತ್ತೊಂದೆಡೆ ಗುಂಪು ಹಂತದಲ್ಲೇ ಸೋತು ಪಾಕಿಸ್ತಾನ ಪಂದ್ಯಾವಳಿಯಿಂದ ಹೊರಬಿದ್ದ ಪರಿಣಾಮ ಭಾರತ ಆಡಿದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ದುಬೈ ನಗರದ ದುಬೈ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು.