ಜೈಲು ವಾರ್ಡನೇ ಕಳ್ಳರ ಗ್ಯಾಂಗ್ ಲೀಡರ್: ಹಲವು ದೇವಸ್ಥಾನಗಳಲ್ಲಿ ಲೂಟಿ ಮಾಡಿದವರ ಬಂಧನ

IMG-20240912-WA0058
Share It

ಗದಗ: ಜೈಲ್ ನ ವಾರ್ಡನ್ ಕಳ್ಳರನ್ನು ಪರಿಚಯಿಸಿಕೊಂಡು ದೇವಾಲಯಗಳನ್ನು ಲೂಟಿ ಮಾಡುತ್ತಿದ್ದ ಮೂವರನ್ನು ಲಕ್ಷ್ಮೇಶ್ವರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ರಾಣೆಬೆನ್ನೂರಿನ ಪ್ರಸಾದ (28), ಪ್ರದೀಪ್‌ (24) ಮತ್ತು ಶ್ರೀಕಾಂತ (29) ಬಂಧಿತರು. ಗೂಗಲ್ ನಲ್ಲಿ ದೇವಸ್ಥಾನಗಳನ್ನು ಗುರುತಿಸಿ, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ ಆರೋಪಿ ಶ್ರೀಕಾಂತ ಜೈಲಿನ ವಾರ್ಡನ್‌ ಆಗಿದ್ದು, ಸದ್ಯ ಅಮಾನತಿನಲ್ಲಿದ್ದಾನೆ.

ಶ್ರೀಕಾಂತ್ ಜೈಲಿನಲ್ಲಿ ವಾರ್ಡನ್‌ ಆಗಿದ್ದಾಗ ಕಳ್ಳರನ್ನು ಪರಿಚಯಿಸಿಕೊಂಡು ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ, ತುಮಕೂರು ಮತ್ತು ಗದಗ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ದೇವಸ್ಥಾನದಲ್ಲಿ ಕಳವು ಮಾಡಿರುವುದು ತಿಳಿದುಬಂದಿದೆ.

ಒಂದೇ ಕುಟುಂಬದ ಮೂವರು (ಪ್ರದೀಪ್, ರಮೇಶ್, ಪ್ರಸಾದ್) ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದರು. ಈ ವೇಳೆ ಜೈಲಿನ ವಾರ್ಡನ್ ಆಗಿದ್ದ ಶ್ರೀಕಾಂತ್ ಬೇಲ್ ಮೇಲೆ ಮೂವರನ್ನು ಬಿಡಿಸಿದ್ದ. ನಂತರ ಮೂವರೂ ಶ್ರೀಕಾಂತ್ ಸೂಚನೆ ಮೇರೆಗೆ ಕಳ್ಳತನ ಮಾಡಿ ಅದನ್ನು ಆತನಿಗೆ ನೀಡುತ್ತಿದ್ದರು. ಶ್ರೀಕಾಂತ್ ತನ್ನ ಜವಾಬ್ದಾರಿ ಮರೆತು ಈ ಗ್ಯಾಂಗ್’ನ ಲೀಡರ್ ಆಗಿದ್ದ.

ಕಳ್ಳತನವಾದ ಬಳಿಕ ಮೂವರು ಕಳ್ಳರು ಶ್ರೀಕಾಂತ್ ಜೊತೆ ಸೇರಿ ಪಾರ್ಟಿ ಮಾಡುತ್ತಿದ್ದಾಗ ಜಗಳವಾಗಿದ್ದು, ಜಗಳದಲ್ಲಿ ವಿಚಾರವನ್ನು ಪೊಲೀಸರಿಗೆ ತಿಳಿಸುತ್ತೇನೆಂದು ರಮೇಶ್ ಹೇಳಿದ್ದಾನೆ. ಇದರಿಂದ ಸಿಟ್ಟಾಗಿರುವ ಇತರರು ರಮೇಶ್ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ನಂತರ ಯಾರಿಗೂ ತಿಳಿಯದಂತೆ ಶವವನ್ನು ಹೂತಿಹಾಕಿದ್ದಾರೆ. ಕೊಲೆಯಾಗಿ ಒಂದು ವರ್ಷವಾದರೂ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.

ಆರೋಪಿಗಳ ಬಂಧನದ ಬಳಿ ಹತ್ಯೆ ಪ್ರಕರಣವೂ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನಲ್ಲಿ ಕೊಲೆ ಮಾಡಿ ಲೇಔಟ್ ವೊಂದಲ್ಲಿ ಮುಚ್ಚಿಹಾಕಿರುವುದಾಗಿ ಆರೋಪಿಗಳು ಹೇಳಿದ್ದಾರೆ.
ಪೊಲೀಸರು ಆರೋಪಿಗಳಿಂದ 46 ಲಕ್ಷ ಮೊತ್ತದ ಚಿನ್ನ, ಬೆಳ್ಳಿ, ವಾಹನಗಳು ಜಪ್ತಿ ಮಾಡಲಾಗಿದೆ. ಹಾಗೂ ಕೃತ್ಯಕ್ಕೆ ಬಳಸಲಾದ ಕಟರ್, ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಶಿರಹಟ್ಟಿ ತಾಲೂಕಿನ ಹೊಳೆಲಮ್ಮ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ ಹಾಗೂ ಬನ್ನಿಕೊಪ್ಪ ದೇವಸ್ಥಾನವನ್ನು ಮೂವರು ಲೂಟಿ ಮಾಡಿದ್ದರು. ತನಿಖೆ ನಡಸಿದ ಲಕ್ಷ್ಮೇಶ್ವರ ಪೊಲೀಸರು ದೇವಸ್ಥಾನದ ಆವರಣದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮೂವರನ್ನು ಬಂಧಿಸಿದ್ದಾರೆ. ಇವರ
ಬಂಧನದಿಂದ 15 ದೇವಸ್ಥಾನ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ.


Share It

You cannot copy content of this page