ಅಪರಾಧ ಸುದ್ದಿ

ಕಲುಷಿತ ನೀರು ಸೇವನೆ: 19ಮಂದಿ ಆಸ್ಪತ್ರೆಗೆ ದಾಖಲು

Share It

ಧಾರವಾಡ: ಕಲುಷಿತ ನೀರು ಸೇವನೆ ಮಾಡಿ ಆರೋಗ್ಯದಲ್ಲಿ ಏರುಪೇರಾಗಿ ೧೯ ಜನರು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬಾರಿ ಮಳೆ ಹೆಚ್ಚಾದ ಹಿನ್ನೆಲೆ ಬೇರೆ ಬೇರೆ ಕಡೆಗಳಿಂದ ನೀರು ಕೆರೆಗೆ ಹರಿದುಬಂದಿದೆ. ಕೆರೆ ನೀರು ಕಲುಷಿತಗೊಂಡ ಕಾರಣದಿಂದ ಜನರಿಗೆ ಜ್ವರ ಬಂದಿದ್ದು, ವಾಂತಿ, ಭೇದಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಇದರಿಂದ ಅಲ್ಲಿನ ಜನರು ಕಂಗಾಲಾಗಿದ್ದಾರೆ.

ಕೆಲವರು ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಲ್ಲಿ ಮಾತ್ರ ತೆಗೆದುಕೊಂಡರೆ, ಕೆಲವರು ಅತಿಯಾಗಿ ಭೇದಿ ಮತ್ತು ಹೊಟ್ಟೆ ನೋವಿನಿಂದ ಬಳಲಿ ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಹಶಿಲ್ದಾರ್​ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಜನರ ಆರೋಗ್ಯ ವಿಚಾರಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ೯ ಮಂದಿ ಪುರುಷರು, ೮ ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಗೆ ಕಳೆದ ಎರಡು ದಿನಗಳಿಂದ ಜ್ವರ ಇತ್ತು. ಇದೀಗ ವಾಂತಿ, ಭೇದಿ ಕಾಣಿಸಿಕೊಂಡಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.

ಎಲ್ಲರೂ ಆರೋಗ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಜನರ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸುವಂತೆ ನಾನು ಸೂಚನೆ ನೀಡಲಾಗಿದ್ದು, ಗುಡಿಸಾಗರ ಗ್ರಾಮಕ್ಕೆ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ತಿಳಿಸಿದರು.


Share It

You cannot copy content of this page