ನವದೆಹಲಿ: ಶನಿವಾರ ಪ್ಯಾರಿಸ್ ನಿಂದ ತವರಿಗೆ ಮರಳಿದ ಪದಕ ವಂಚಿತೆ ವಿನೇಶ್ ಪೋಗಟ್ ತಮ್ಮ ಸಹೋದರನ ಜತೆ ರಕ್ಷಾ ಬಂಧನ ಆಚರಿಸಿಕೊಂಡು ಖುಷಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ತಮ್ಮ ಗ್ರಾಮ ಬಾಳಲಿಯಲ್ಲಿ ಸಹೋದರನಿಗೆ ರಾಕಿ ಕಟ್ಟಿ ಒಲಂಪಿಕ್ಸ್ ಪೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್ ಸಂಭ್ರಮಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಸಹೋದರ ಭರ್ಜರಿ ಗಿಫ್ಟ್ ಅನ್ನೇ ನೀಡಿದ್ದಾರೆ. ಇದು ಇಬ್ಬರ ಖುಷಿಯನ್ನು ಹೆಚ್ಚಿಸಿದೆ.
ರಕ್ಷಾ ಬಂಧನದ ದಿನ ಇಂತಹದ್ದೊಂದು ಅವಿಸ್ಮರಣೀಯ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ರಾಕಿ ಕಟ್ಟಿದ ಸಹೋದರಿಗೆ ಪೋಗಟ್ ಸಹೋದರ 500 ರುಪಾಯಿಗಳ ಹಣದ ಬಂಡಲ್ ನೀಡಿದ್ದಾರೆ. ಅದನ್ನು ಖುಷಿಯಿಂದ ಸ್ವೀಕರಿಸಿದ ಪೋಗಟ್ ಸಂಭ್ರಮಿಸಿದ್ದಾರೆ.
ಅನಂತರ ವಿಡಿಯೋ ದಲ್ಲಿ ಮಾತನಾಡಿರುವ ಪೋಗಟ್, ಕಳೆದ ರಕ್ಷಾ ಬಂಧನದ ದಿನ ನನ್ನ ಸಹೋದರ ನನಗೆ, ಐನೂರು ರು. ನೀಡಿದ್ದ. ಈ ಸಲ ಐನೂರರ ಬಂಡಲ್ ನೀಡಿದ್ದಾನೆ. ಇದು ಅವನ ಜೀವಮಾನದ ಸಂಪಾದನೆ. ಅದು ನನ್ನ ಕೈಸೇರಿದೆ. ಎನ್ನುವ ಮೂಲಕ ದೇಶದ ಎಲ್ಲ ಸಹೋದರ ಸಹೋದರಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ.