ರಾಜಕೀಯ ಸುದ್ದಿ

ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಚಿವ ಎಂ.ಬಿ.ಪಾಟೀಲ್

Share It

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ನವದೆಹಲಿಯಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು ಸಚಿವರಾದ ರಾಜನಾಥ್ ಸಿಂಗ್, ಸೀತಾರಾಮನ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

2025ರ ಫೆ. 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆ ಎಂ.ಬಿ. ಪಾಟೀಲ ಅವರು ದೆಹಲಿಗೆ ಎರಡು ದಿನ ಬೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್ ಕಾರಿಡಾರ್ ಸ್ಥಾಪನೆ, ರಾಜ್ಯದಲ್ಲಿರುವ ಬಿಎಚ್ಇಎಲ್ ಮತ್ತು ಬಿಇಎಂಎಲ್ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವು ಕುರಿತು ಚರ್ಚಿಸಿದ್ದಾರೆ.

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ರಾಜ್ಯದ ಕೈಗಾರಿಕಾ ಯೋಜನೆಗಳು, ಸೆಮಿಕಂಡಕ್ಟರ್ ವಲಯ, ಹೈಟೆಕ್-ಉತ್ಪಾದನಾ ಘಟಕಗಳು, ಕೈಗಾರಿಕಾ ಕಾರಿಡಾರ್ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಇ.ವಿ. ವಲಯದಲ್ಲಿ ನವೋದ್ಯಮಗಳಿಗೆ 10 ಸಾವಿರ ಕೋಟಿ ರೂ. ಪೂರೈಸಲು ಎದುರಾಗಿರುವ ಸವಾಲು, ಫೇಮ್-3 ಯೋಜನೆಯ ಜಾರಿಯಲ್ಲಿ ಆಗುತ್ತಿರುವ ವಿಳಂಬ, ರಕ್ಷಣಾ ತಂತ್ರಜ್ಞಾನ ಹಬ್ ಗಳ ಸ್ಥಾಪನೆ, ಬೆಂಗಳೂರು ಗ್ರಾಮಾಂತರದಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆಗೆ ಬಾಕಿ ಇರುವ ಅನುಮೋದನೆ, ಹಾರೋಹಳ್ಳಿ, ಕುಡುತಿನಿ ಮತ್ತು ದೇವಕತ್ತಿಕೊಪ್ಪದಲ್ಲಿ ಕೈಗಾರಿಕಾ ಯೋಜನೆಗಳಿಗೆ ಬಾಕಿ ಇರುವ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ, ಸೆಮಿಕಂಡಕ್ಟರ್ ಕಂಪನಿ ಸ್ಥಾಪನೆಯ ತುರ್ತು ಮತ್ತು ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್ ಸಿಟಿ ಯೋಜನೆಯಿಂದ ಕರ್ನಾಟಕವನ್ನು ಹೊರಗಿಟ್ಟಿರುವುದರ ಬಗ್ಗೆ ಮಾತುಕತೆ ನಡೆಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ, ಬೇಗನೆ ಹಾಳಾಗುವಂತಹ ಪದಾರ್ಥಗಳನ್ನು ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್ಟಿ ತೆರಿಗೆಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.


Share It

You cannot copy content of this page