ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ ಹೆಸರು ಘೋಷಣೆ
ಉಡುಪಿ/ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೊನೆಗೂ ತನ್ನ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದೆ. ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ ಅವರ ಹೆಸರನ್ನು ಬುಧವಾರದಂದು ಘೋಷಣೆ ಮಾಡಿದೆ.
ಪ್ರಮುಖ ಎದುರಾಳಿಯಾಗಿರುವ ಬಿಜೆಪಿ ಈಗಾಗಲೇ ಕಿಶೋರ್ ಕುಮಾರ್ ಅವರ ಹೆಸರನ್ನು ಪ್ರಕಟಿಸಿದೆ.
1994ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ರಾಜು ಪೂಜಾರಿ ಅವರು, ಬೈಂದೂರು ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿಗೆ ಸ್ವಂತ ಕಟ್ಟಡ ನಿರ್ಮಾಣವಾಗಿತ್ತು. ನಾವುಂದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಾಜು ಪೂಜಾರಿ ಅವರು ಕೇಂದ್ರದ ಮಾಜಿ ಸಚಿವ ದಿ. ಆಸ್ಕರ್ ಫರ್ನಾಂಡಿಸ್ ಮತ್ತು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಅವರ ಆತ್ಮೀಯರು.
ಕಾಂಗ್ರೆಸ್ಸಿನಿಂದ ಈ ಬಾರಿ ಭುಜಂಗ ಶೆಟ್ಟಿ, ಹರಿಪ್ರಸಾದ್ ರೈ, ಡಿ.ಆರ್. ರಾಜು,ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಭುಜಂಗ ಶೆಟ್ಟಿ ಮತ್ತು ರಾಜು ಪೂಜಾರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು. ಉದ್ಯಮಿ ಹರಿಪ್ರಸಾದ್ ರೈ ಚುನಾವಣೆಯಲ್ಲಿ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ವರಿಷ್ಠರು ದಕ್ಷಿಣ ಕನ್ನಡ ವಿಧಾನಪರಿಷತ್ ಮತಕ್ಷೇತ್ರದಲ್ಲಿರುವ ಗಣನೀಯ ಪ್ರಮಾಣದ ಬಿಲ್ಲವ ಸಮುದಾಯದ ಮತಗಳ ಹಿನ್ನೆಲೆಯಲ್ಲಿ ರಾಜು ಪೂಜಾರಿ ಅವರ ಆಯ್ಕೆಗೆ ಮನ್ನಣೆ ನೀಡಿದ್ದಾರೆ. ಬಿಲ್ಲವ ಸಮುದಾಯದ ಮತಗಳ ಸಂಖ್ಯೆ ಹೆಚ್ಚು ಇರುವುದರಿಂದ ಆ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಉಡುಪಿ ಜಿಲ್ಲೆಗೆ ಆದ್ಯತೆ ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಭರವಸೆ ನೀಡಿದ್ದರು.


