ಬೆಂಗಳೂರು: ನಾವು ಕಣ್ಣೀರಲ್ಲಿ ಕೈತೊಳೆತುತ್ತಿದ್ದೇವೆ. ಪೊಲೀಸರು ತನಿಖೆ ಮಾಡುತ್ತಿರುವುದನ್ನು ನೋಡಿ ಸರಕಾರ, ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಬಂದಿತ್ತು. ನಮ್ಮ ಮಗನ ಸಾವಿಗೆ ನ್ಯಾಯ ಸಿಗುವ ಭರವಸೆ ಇತ್ತು. ಇಂದು ಅದು ಕುಸಿದಿದೆ ಎಂದು ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ ಕಿಡಿಕಾರಿದ್ದಾರೆ.
ಜೈಲಿನಲ್ಲಿ ರೌಡಿಗಳೊಂದಿಗೆ ಬಿಂದಾಸ್ ಮೂಡ್ ನಲ್ಲಿರುವ ದರ್ಶನ್ ಫೋಟೋ ನೋಡಿದ ನಂತರ ಮಾತನಾಡಿದ ಅವರು, ಫೋಟೋ ನೋಡಿ ದರ್ಶನ್ ಜೈಲಲ್ಲಿದ್ದಾರೋ ಅಥವಾ ಯಾವುದಾದರೂ ರೆಸಾರ್ಟ್ ನಲ್ಲಿದ್ದಾರೋ ಎಂಬ ಅನುಮಾನ ಮೂಡುವಂತಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು, ಗೃಹಸಚಿವರು ಈ ಬಗ್ಗೆ ಗಮನ ಹರಿಸಬೇಕು. ಅವರನ್ನು ಭೇಟಿಯಾದಾಗ ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ನ್ಯಾಯ ಸಿಗುವ ಭರವಸೆ ಇತ್ತು. ಆದರೆ, ಈ ಬೆಳವಣಿಗೆಯಿಂದ ಭರವಸೆ ಕಳೆದುಕೊಂಡಿದ್ದೇವೆ. ಇದು ಅನಿವಾರ್ಯವಾಗಿ ಸಿಬಿಐ ತನಿಖೆಗೆ ಒತ್ತಾಯಿಸುವಂತೆ ಮಾಡುತ್ತಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವರಾದ ಡಾ.ಜಿ. ಪರಮೇಶ್ವರ ಅವರು ಈ ಕುರಿತು ಗಮನಹರಿಸಬೇಕು. ನಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು. ನ್ಯಾಯ ಎಂಬುದು ಬಡವರಿಗೊಂದು, ಶ್ರೀಮಂತರಿಗೊಂದು ರೀತಿಯದ್ದು ಎಂಬ ಅನುಮಾನ ಜನರಿಂದ ದೂರವಾಗಲು ಇದು ಸಾಧ್ಯವಾಗಬೇಕು ಎಂದು ಅವರು ಒತ್ತಾಯಿಸಿದರು.