ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಎಷ್ಟೇ ಬುದ್ದಿ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಆಕೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ. ಕಿರಣ್ ಎಂಬ ಕ್ಯಾಬ್ ಚಾಲಕನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಕಿರಣ್ (31) ಮತ್ತು ನವ್ಯಾಶ್ರೀ (28) ಎಂಬ ದಂಪತಿ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕಿರಣ್ ಕ್ಯಾಬ್ ಚಾಲಕನಾಗಿದ್ದು, ನವ್ಯಾಶ್ರೀ ನೃತ್ಯ ಶಿಕ್ಷಕಿಯಾಗಿದ್ದಳು. ಈ ನಡುವೆ ಕಿರಣ್ ಸ್ನೇಹಿತ ಅನಿಲ್ ಹಾಗೂ ನವ್ಯಾಶ್ರೀ ನಡುವೆ ಆತ್ಮೀಯತೆ ಬೆಳೆದು, ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು.
ಈ ವಿಚಾರ ತಿಳಿದಿದ್ದ ಕಿರಣ್, ಪತ್ನಿ ಮತ್ತು ಅನಿಲ್ಗೆ ಬುದ್ದಿವಾದ ಹೇಳಿದ್ದ. ಆದರೆ, ಕಿರಣ್ ಮುಂದೆಯೇ ಅನಿಲ್ನನ್ನು ಹೊಗಳುತ್ತಿದ್ದ ನವ್ಯಾಶ್ರೀ, ಒಂದೇ ಮನೆಯಲ್ಲಿದ್ದರೂ ಸಹ 1 ವರ್ಷದಿಂದ ಪತಿಯಿಂದ ಅಂತರ ಕಾಯ್ದುಕೊಂಡಿದ್ದಳು.
ಅಲ್ಲದೇ, ಪತಿ ಮನೆಯಲ್ಲಿರುವಾಗಲೇ ಪ್ರಿಯಕರ ಅನಿಲ್ಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದಳು. ಈ ವಿಚಾರಕ್ಕೆ ಹಲವು ದಿನಗಳಿಂದ ದಂಪತಿ ನಡುವೆ ಗಲಾಟೆಯಾಗುತ್ತಿತ್ತು. ಮಂಗಳವಾರ ಬೆಳಗ್ಗೆ ಸ್ನೇಹಿತೆ ಐಶ್ವರ್ಯಾಗೆ ಕರೆ ಮಾಡಿದ್ದ ನವ್ಯಾಶ್ರೀ ಮನೆಗೆ ಬರುವಂತೆ ಕರೆಸಿಕೊಂಡಿದ್ದಳು. ಆಗ ತನಗೆ ಮನೆಯಲ್ಲಿ ಮತ್ತು ಹೊರಗಡೆಯೂ ನೆಮ್ಮದಿ ಇಲ್ಲ ಎಂದು ಹೇಳಿಕೊಂಡಿದ್ದಳು.
ಬಳಿಕ ಇಬ್ಬರೂ ಕಾರಿನಲ್ಲಿ ಆರ್.ಆರ್. ನಗರಕ್ಕೆ ತೆರಳಿ ಅನಿಲ್ನನ್ನು ಭೇಟಿಯಾಗಿದ್ದರು. ನಂತರ ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ವಿಚಾರವನ್ನು ನವ್ಯಾಶ್ರೀ ತನ್ನ ಪ್ರಿಯಕರ ಅನಿಲ್ಗೆ ಹೇಳಿದ್ದಳು. ಆಗ ಅನಿಲ್, ಪೊಲೀಸ್ ಠಾಣೆಗೆ ತೆರಳಿ ಕಿರಣ್ ವಿರುದ್ಧ ದೂರು ನೀಡುವಂತೆ ಸಲಹೆ ನೀಡಿದ್ದ.
ನಂತರ ಸ್ನೇಹಿತೆಯರಿಬ್ಬರೂ ನವ್ಯಾಶ್ರೀ ಮನೆಗೆ ಬಂದಿದ್ದರು. ಮದ್ಯ ಸೇವಿಸಿದ್ದ ಐಶ್ವರ್ಯಾ ನಿದ್ರೆಗೆ ಜಾರಿದ್ದಳು. ಅದೇ ವೇಳೆ ಮನೆಗೆ ಬಂದ ಕಿರಣ್, ಪತ್ನಿಯೊಂದಿಗೆ ಜಗಳವಾಡಿ, ಐಶ್ವರ್ಯಾಳನ್ನು ಹೊರಗೆ ಕಳಿಸುವಂತೆ ಹೇಳಿದ್ದ. ಆಗ ನವ್ಯಾಶ್ರೀ ನಿರಾಕರಿಸಿದ್ದು, ನೀನು ಹೊರಗಡೆಯೆ ಮಲಗು ಎಂದು ಗಲಾಟೆ ಮಾಡಿ ಪತಿಗೆ ಚಾಕು ತೋರಿಸಿ ಹೆದರಿಸಿ, ಅದೇ ಚಾಕುವನ್ನು ತಲೆಯ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ದಳು.
ಕೆಲ ಹೊತ್ತಿನ ಬಳಿಕ ಕೋಣೆಗೆ ಬಂದ ಆರೋಪಿ, ಅದೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ಮಲಗಿದ್ದ ಐಶ್ವರ್ಯಾಗೆ ಈ ಘಟನೆ ಬಗ್ಗೆ ಅರಿವಿರಲಿಲ್ಲ. ಮುಂಜಾನೆ 6 ಗಂಟೆ ಸುಮಾರಿಗೆ ತನ್ನ ಬಟ್ಟೆ ರಕ್ತದಲ್ಲಿ ಒದ್ದೆಯಾಗಿರುವುದನ್ನು ಗಮನಿಸಿದ್ದ ಐಶ್ವರ್ಯಾ, ಎಚ್ಚರಗೊಂಡು ನೋಡಿದಾಗ ನವ್ಯಾಶ್ರೀ ಕೊಲೆಯಾಗಿರುವುದು ಗೊತ್ತಾಗಿದೆ.
ಬಳಿಕ ಜೋರಾಗಿ ಕೂಗಿಕೊಂಡ ಐಶ್ವರ್ಯಾ ಸ್ಥಳೀಯರಿಗೆ ಮಾಹಿತಿ ನೀಡಿದ್ದಳು. ನಂತರ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.