ರಾಜಕೀಯ ಸುದ್ದಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಿ ಮತ್ತೆ ಬೇಡಿಕೆ ಪುನರುಚ್ಚರಿಸಿದ ಶಾಸಕ

Share It

ಬೆಳಗಾವಿ: ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕು ಎಂದು ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಆಗ್ರಹಿಸಿದ್ದಾರೆ.

ರಾಯಬಾಗದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಅಥಣಿ, ಮುಗಳಖೋಡ, ಹಾರೂಗೇರಿ ಸೇರಿದಂತೆ ಇತರ ಪ್ರದೇಶಗಳ ಬಡ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಬಳಿಗೆ ತೆಗೆದುಕೊಂಡು ಹೋಗಬೇಕಾದರೆ ಸುಮಾರು 130 ಕಿಲೋಮೀಟರ್ ಗಿಂತಲೂ ಅಧಿಕ ಕ್ರಮಿಸಬೇಕಾಗಿದೆ.

ತಾವು ದುಡಿದ ಹಣವನ್ನು ಬಸ್ಸಿಗೆ ಖರ್ಚು ಮಾಡ ಬೇಕಾಗುತ್ತದೆ. ಜೊತೆಗೆ ಬೆಳಗಾವಿಯಲ್ಲಿ ತಂಗಬೇಕಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿ ಅವರನ್ನು ಭೇಟಿ ಆದಾಗಲೆಲ್ಲ ಕೈಮುಗಿದು ಕೇಳುತ್ತಿರುತ್ತೇನೆ. ಮೊದಲು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಿ ಎಂದು ಅವರ ಬಳಿ ಮನವಿ ಮಾಡಿಕೊಳ್ಳುತ್ತಾ ಬಂದಿರುವೆ.

ಜಿಲ್ಲೆಯನ್ನು ಒಡೆಯಬೇಕಾದ ಕೆಲಸ ಆಗಬೇಕು. ಅಲ್ಲಿಯವರೆಗೆ ಜಿಲ್ಲಾಧಿಕಾರಿಗಳು ಇಂತಹ ಜನಸ್ಪಂದನ ಕಾರ್ಯಕ್ರಮಗಳನ್ನು ಮೂರ್ನಾಲ್ಕು ತಿಂಗಳಿಗೊಮ್ಮೆ ಹಮ್ಮಿಕೊಂಡು ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.


Share It

You cannot copy content of this page