ಬೆಂಗಳೂರು: ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರ ತುಮಕೂರು ಕಚೇರಿಗೆ ಆಕಸ್ಮಿಕವಾಗಿ ಆಗಮಿಸಿದ ಹಾಲುಮತದ ಗೊರವಯ್ಯ ದೊಡ್ಡ ಭವಿಷ್ಯ ನುಡಿದಿದ್ದಾರೆ.
“ಶೀಘ್ರದಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರಲಿದೆ” ಎಂದು ಹಾಲುಮತ ಸಮುದಾಯದ ಗೊರವಯ್ಯ ಭವಿಷ್ಯ ಹೇಳಿದ್ದಾರೆ.
ಈ ವೇಳೆ, ಸಚಿವ ಪರಮೇಶ್ವರ್ ಅವರು ತಮ್ಮ ತುಮಕೂರು ಕಚೇರಿಯಲ್ಲಿ ಇರಲಿಲ್ಲ. ಆದರೆ
ಗೃಹ ಸಚಿವ ಡಾ.ಜಿ.
ಪರಮೇಶ್ವರ್ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ. ನಾಗಣ್ಣ ಅವರ ಬಳಿ ಹಾಲುಮತ ಸಮುದಾಯದ ಗೊರವಯ್ಯ ಈ ಭವಿಷ್ಯವನ್ನು ನುಡಿದಿದ್ದಾರೆ.
“ನಾನು ಹೇಳುತ್ತೇನೆ, ಸಿದ್ದರಾಮಯ್ಯನವರು ಅತಿ ಶೀಘ್ರದಲ್ಲೇ ಸಿಎಂ ಸ್ಥಾನದಿಂದ ಇಳಿದು, ಪರಮೇಶಣ್ಣನವರು ಮುಖ್ಯಮಂತ್ರಿ ಆಗಲಿದ್ದಾರೆ. ನಾವು ಆಶೀರ್ವಾದ ಮಾಡುತ್ತೇವೆ, ಅಣ್ಣನ ಹೆಸರಿನಲ್ಲಿ ಅನ್ನದಾನವನ್ನು ಮಾಡಿ” ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಹಾಲುಮತದ ಗೊರವಯ್ಯ ನುಡಿದ ರಾಜ್ಯ ರಾಜಕೀಯದ ಭವಿಷ್ಯ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಪ್ರಯತ್ನ ನಡೆಸುತ್ತಿರುವುದು ಗೌಪ್ಯವಾಗಿ ಏನೂ ಉಳಿದಿಲ್ಲ. ಹಲವು ಜ್ಯೋತಿಷಿಗಳು ಅವರಿಗೂ ಸಿಎಂ ಯೋಗವಿದೆ ಎಂದು ಹೇಳಿದ್ದಾರೆ.
ಹೀಗಾಗಿ, ಈಗ ಹಾಲುಮತ ಸಮುದಾಯದ ಗೊರವಯ್ಯ ನುಡಿದ ಕಾರ್ಣಿಕ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ ನಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂದು ಬಿಜೆಪಿ ನಾಯಕರು ಸತತವಾಗಿ ಹೇಳುತ್ತಲೇ ಬರುತ್ತಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಕಚೇರಿಯೂ ಇದೆ.
ವಿಪರ್ಯಾಸವೆಂದರೆ ಹಾಲು ಕೆಡಬಹುದು, ಆದರೆ ಹಾಲುಮತ ಸಮುದಾಯ ಎಂದಿಗೂ ಕೆಡುವುದಿಲ್ಲ ಎಂದು ಕೋಡಿ ಮಠದ ಶ್ರೀಗಳು ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರು ಕೆಳಗಿಳಿಯುವುದು ಅಷ್ಟು ಸುಲಭವಿಲ್ಲ ಎಂದು ಭವಿಷ್ಯ ಹೇಳಿ ಸದ್ಯ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಮುಂದುವರೆಯಲಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ರಾಜಕೀಯದ ಭವಿಷ್ಯ ಹೇಳಿದ್ದರು.

