ಸುದ್ದಿ

ಕಾಮಗಾರಿ ಬಿಲ್ ಬಾಕಿ ಪಾವತಿಸದ ಕಾರಣ ಬೆಳಗಾವಿ ಜಿಲ್ಲಾಧಿಕಾರಿ ಕಾರು ಜಪ್ತಿ!

Share It

ಬೆಳಗಾವಿ: ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ ಬಡ್ಡಿ ಸಮೇತ ರೂ.1.31 ಕೋಟಿ ಬಾಕಿ ಬಿಲ್ ನೀಡುವುದಕ್ಕೆ ವಿಫಲವಾದ ಕಾರಣ ಅರ್ಜಿದಾರರ ಪರ ನ್ಯಾಯವಾದಿ ಓ.ಬಿ.ಜೋಶಿ ಅವರು, ಇಲ್ಲಿಯ ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರನ್ನು ಶುಕ್ರವಾರ ಜಪ್ತಿ ಮಾಡಿದರು.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ದೂದಗಂಗಾ ನದಿಯ ಬ್ಯಾರೇಜ್ ನಿರ್ಮಾಣದ ಗುತ್ತಿಗೆಯನ್ನು ನಾರಾಯಣ ಕಾಮತ್ ಅವರಿಗೆ 1992-93 ರಲ್ಲಿ ನೀಡಲಾಗಿತ್ತು.

ಕಾಮಗಾರಿಗೆ ಬೇಕಿರುವ ಅನುದಾನ, ಸಿಮೆಂಟ್ ಅನ್ನು ಇಲಾಖೆ ನೀಡುವುದಾಗಿ ತಿಳಿಸಿತ್ತು. ಕಾಮಗಾರಿ ಆರಂಭವಾಗಿ ಮೂರು ವರ್ಷಗಳಾದರೂ ಅನುದಾನ ಕೊಡಲಿಲ್ಲ. ನಾರಾಯಣ 1995ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಗುತ್ತಿಗೆದಾರನಿಗೆ ರೂ.35 ಲಕ್ಷ ಪಾವತಿಸುವಂತೆ ಆದೇಶ ನೀಡಿತ್ತು. ಸರ್ಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ಮಾಡಿದ ಹೈಕೋರ್ಟ್, ಮರುವಿಚಾರಣೆ ಮಾಡುವಂತೆ ಆದೇಶಿಸಿತ್ತು.

ಮರುವಿಚಾರಣೆ ಮಾಡಿದ ಕೆಳ ನ್ಯಾಯಾಲಯ, 2025ರ ಜೂನ್ ತಿಂಗಳೊಳಗೆ ಒಟ್ಟು ಬಾಕಿ ಮೊತ್ತದಲ್ಲಿ ಶೇ 50ರಷ್ಟು(ಬಡ್ಡಿ ಸಮೇತವಾಗಿ) ಗುತ್ತಿಗೆದಾರನಿಗೆ ಪಾವತಿಸುವಂತೆ ತೀರ್ಪು ಕೊಟ್ಟಿತ್ತು. ಈವರೆಗೂ ಹಣ ನೀಡದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಯಾಗಿತ್ತು ಎಂದು ಜೋಶಿ ತಿಳಿಸಿದರು.


Share It

You cannot copy content of this page