ಉಪಯುಕ್ತ ಸುದ್ದಿ

ತುಳು ಭಾಷೆ ಯೂನಿಕೋಡ್‌ಗೆ ಸೇರ್ಪಡೆ: ಕರಾವಳಿಗರ ಹರ್ಷ

Share It

ಮಂಗಳೂರು: ಕರಾವಳಿ ಭಾಗದ ತುಳು ಭಾಷೆ ಯೂನಿಕೋಡ್‌ಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಹಲವು ವರ್ಷಗಳ ತುಳುವರ ಕನಸು ನನಸಾದಂತಾಗಿದೆ.

ಯೂನಿಕೋಡ್ ನ 16ನೇ ಆವೃತ್ತಿಯಾಗಿ ತುಳು ಲಿಪಿ ಸೇರ್ಪಡೆಯಾಗಿದ್ದು, ಒಟ್ಟು 80 ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಿಪಿ ಲಭ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್​, ಸ್ಪೀಚ್​ ಟು ಟೆಕ್ಸ್ಟ್ ​ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಇವೆಲ್ಲವನ್ನೂ ಮಾಡಲು ಸಾಧ್ಯವಾಗಲಿದೆ.

2017ರಲ್ಲಿ ಯೂನಿಕೋಡ್​ ಅಗತ್ಯದ ಹಿನ್ನೆಲೆ ತುಳು ಸಾಹಿತ್ಯ ಅಕಾಡೆಮಿಯು ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಸಮಿತಿ ರಚಿಸಿತ್ತು. ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ ತಾಂತ್ರಿಕ ಸಲಹೆ ನೀಡಿದ್ದರು.

ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್‌ಗೆ ಕಳುಹಿಸಲಾಗಿತ್ತು. ಅಂತಿಮವಾಗಿ ‘ತುಳು-ತಿಗಳಾರಿ’ ಹೆಸರಿನಲ್ಲಿ ಲಿಪಿಯನ್ನು ಯೂನಿಕೋಡ್‌ಗೆ ಸೇರಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ‌ ಅವರು 2001ರಲ್ಲಿ ಯೂನಿಕೋಡ್​ ಕನ್ಸೋರ್ಶಿಯಂಗೆ ಹೋಗಿದ್ದಾಗ ಯೂನಿಕೋಡ್‌ನಲ್ಲಿ ಕನ್ನಡವನ್ನು ಸರಿಪಡಿಸಲು ಸಹಾಯ ಮಾಡಿದ್ದರು. ಆಗ ತುಳುವನ್ನು ಕೂಡ ಸೇರಿಸಬೇಕೆಂದು ಮನವಿ ಮಾಡಿದ್ದರು. ಅದರಂತೆ, ತುಳುವಿಗೆ ಒಂದು ಜಾಗ ಕಾಯ್ದಿಟ್ಟಿದ್ದರು.

ತುಳು ಯೂನಿಕೋಡ್ ಲಿಪಿ ಹೇಗಿರಬೇಕು ಎಂಬ ಕಡತ ಕಳುಹಿಸಿ ಎಂದು ಕೇಳಿಕೊಂಡಿದ್ದರು. ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯುನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆದರೆ ಬಹುತೇಕ ಅಕ್ಷರಗಳು ಬಂದಿವೆ.

2017ರಲ್ಲಿ ಅಂದಿನ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ವಿಷಯ ಸಮನ್ವಯತೆಗೆ ತಜ್ಞರ ಸಮಿತಿ ರಚಿಸಿ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ.

ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ.ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್. ವಿಘ್ನರಾಜ್, ಆಕಾಶ್ ರಾಜ್ ಸೇರಿ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.


Share It

You cannot copy content of this page