ಬೆಂಗಳೂರು: ಶಿಘ್ರದಲ್ಲೇ ವಿವಿಧ ನಿಗಮ ಮಂಡಳಿಗೆ ನಿರ್ದೇಶಕ, ಸದಸ್ಯ ಸ್ಥಾನಗಳಿಗೆ ಒಂದು ಸಾವಿರಕ್ಕೂ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿದೆ.
ರಾಜ್ಯದಲ್ಲಿರುವ 80ಕ್ಕೂ ಹೆಚ್ಚು ನಿಗಮ ಮಂಡಳಿಗಳಲ್ಲಿ 1140 ಕಾರ್ಯಕರ್ತರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಇದೇ 13ರ ಒಳಗೆ ಸಂಭವನೀಯರ ಪಟ್ಟಿ ಸಿದ್ಧಪಡಿಸಿ, ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಸಮಿತಿಯ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ಸದಸ್ಯರ ನೇಮಕ ಸೇರಿದಂತೆ ಇತ್ತೀಚೆಗೆ ನಡೆದ ಕೆಲವು ನೇಮಕಾತಿಗಳಿಗೆ ಕಾಂಗ್ರೆಸ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆಗೆ ರಚಿಸಿದ ಸಮಿತಿಯ ಸಭೆ ನಡೆಸಲಾಗಿತ್ತು.
ಪಕ್ಷ ಸಂಘಟನೆಗೆ ಶ್ರಮಿಸಿದ ಕಾರ್ಯಕರ್ತರನ್ನು ಕಡೆಗಣಿಸಬಾರದು. ಈ ನಿಟ್ಟಿನಲ್ಲಿ ಜಿಲ್ಲಾ ಘಟಕಗಳ ಅಧ್ಯಕ್ಷರಿಂದಲೂ ಹೆಸರುಗಳನ್ನು ಪಡೆಯಬೇಕು. ಯುವ ಕಾಂಗ್ರೆಸ್, ಸಾಮಾಜಿಕ ಜಾಲತಾಣ, ಎನ್‌ಎಸ್‌ಯುಐ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳಲ್ಲಿ ಕಾರ್ಯನಿರ್ವಹಿಸಿದ ಅರ್ಹರನ್ನು ಗುರುತಿಸಬೇಕು. ರಾಜಕೀಯವಾಗಿ ಈವರೆಗೂ ಗುರುತಿಸಿಕೊಳ್ಳದ ತಳ ಸಮುದಾಯದವರಿಗೂ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಬೇಕು ಎಂದು ಪರಮೇಶ್ವರ ಸೂಚಿಸಿದರು.
ಮಂಗಳವಾರ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ್ ಲಾಡ್, ಜಿ.ಸಿ. ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಹರ್ಷದ್, ರೂಪಕಲಾ ಶಶಿಧರ್, ಮುಖಂಡರಾದ ವಿ.ಆರ್. ಸುದರ್ಶನ್, ಎಂ.ಹರೀಶ್ ಕುಮಾರ್ ಇದ್ದರು.