ರಾಜಕೀಯ ಸುದ್ದಿ

ಆದಾಯಕ್ಕೂ ಲಾಭಕ್ಕೂ ಅಂತರ ಗೊತ್ತಿಲ್ಲದ ಅಧಮರು : ಬಿಜೆಪಿ ಟ್ವೀಟ್ ಗೆ ರಾಮಲಿಂಗಾ ರೆಡ್ಡಿ ಖಡಕ್ ಉತ್ತರ

Share It

ಬೆಂಗಳೂರು: ಬಿಎಂಟಿಸಿ ದರ ಏರಿಕೆ ಮಾಡಲು ಸರಕಾರ ಹೊರಟಿದೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಉತ್ತರ ಕೊಟ್ಟಿದ್ದಾರೆ.

ಈ ಕುರಿತು ಖಾರವಾಗಿ ಟ್ವೀಟ್ ಮಾಡಿರುವ ಅವರು, ಸಾಮಾನ್ಯ ಜ್ಞಾನವೇ ಇಲ್ಲದವರೊಂದಿಗೆ‌ ಪ್ರತಿದಿನ ಅವರು ಮಾಡುವ ಟ್ಟೀಟ್ ಗಳಿಗೆ ಉತ್ತರ ಕೊಡಬೇಕಾಗಿದೆಯಲ್ಲ ಎಂಬುದು ದುರಂತವೆನಿಸಿದರೂ, ನಮ್ಮ‌ ಜವಾಬ್ದಾರಿಯಿಂದ ನಾವು ನುಳುಚಿಕೊಳ್ಳುವುದಿಲ್ಲ ಎಂಬುದಕ್ಕಾಗಿ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ ಎಂದಿದ್ದಾರೆ.

ಸರ್ಕಾರ 30.09.2000ರಂದು ಹೊರಡಿಸಲಾದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆ‌ರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರ ಹೆಚ್ಚಳವಾದಾಗ ಪ್ರಯಾಣ ದರ ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಅರಿವು ಇವರಿಗೆ ಇಲ್ಲವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆಗಳ‌ ಅಭಿವೃದ್ಧಿಯ 2 ಪ್ರಮುಖ ಅಂಗಗಳು ಕಾರ್ಮಿಕರು ಹಾಗೂ ಬಸ್ಸುಗಳು. ದುರಾದೃಷ್ಟವೆಂದರೆ, ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13,888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು ನೇಮಕಾತಿ ಆಗಿಲ್ಲ. ನಮ್ಮ ಸರ್ಕಾರ ಸಾರಿಗೆ ಸಂಸ್ಥೆಗಳಲ್ಲಿ 8,900 ಖಾಯಂ ನೇಮಕಾತಿಗೆ ಚಾಲನೆ ನೀಡಿ,‌ ಈಗಾಗಲೇ 1883 ಚಾಲಕ/ ನಿರ್ವಾಹಕ/ತಾಂತ್ರಿಕ ಸಿಬ್ಬಂದಿ ಹುದ್ದೆ ಭರ್ತಿ ಮಾಡಿದೆ ಎಂದು ವಿವರಿಸಿದ್ದಾರೆ.

ಸಂಸ್ಥೆಗಳಿಗೆ ಡಕೋಟಾ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಬಿ.ಜೆ.ಪಿ ಅವರಿಗೆ ಸಲ್ಲಬೇಕು‌. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆ ಆಗಿಲ್ಲ, ಕಳೆಪ ಸ್ಥಿತಿಯ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಸಾಧುವಲ್ಲದ ಕಾರಣ, ನಿಷ್ಕ್ರಿಯಗೊಳಿಸುವ ಕಾರ್ಯ ಒಂದೆಡೆಯಾದರೆ, 1300 ಬಸ್ಸುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೂಡ ನಡೆದಿದೆ ಎಂದಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ 5,900 ಹೊಸ ಬಸ್ಸುಗಳ ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ . ಕಳೆದ 1 ವರ್ಷದಲ್ಲಿ ನಾಲ್ಕು‌ ನಿಗಮಗಳಲ್ಲಿ 3000 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ ಎಂದು ವಿವರಿಸಿದ್ದಾರೆ.

ಡೀಸೆಲ್ ತೈಲದ ಬೆಲೆ ಹೆಚ್ಚಳದಿಂದ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ರೂ. 473.28 ಕೋಟಿ ಮತ್ತು ಸಿಬ್ಬಂದಿ ವೆಚ್ಚದಲ್ಲಿ ಹೆಚ್ಚಳ ರೂ.556.59 ಕೋಟಿ ಸೇರಿ ಒಟ್ಟಾರೆ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ಹೆಚ್ಚಳವಾಗಿರುವ ಅಂದಾಜು ಮೊತ್ತ ರೂ.1029.87 ಕೋಟಿಗಳಾಗುತ್ತದೆ. ತೈಲದ ಪ್ರತಿ ಲೀಟರ್‌ಗೆ ಸರಾಸರಿ ರೂ 62.44 ರಷ್ಟು ಇದ್ದಾಗ 2020 ರಲ್ಲಿ ಬಸ್ ದರ ಏರಿಕೆಯಾಗಿತ್ತು. ಹಾಲಿ ಕರಾರಸಾ ನಿಗಮಕ್ಕೆ ರೂ 85.80 ಡೀಸೆಲ್ ದರವಿದೆ. ಬಿ.ಎಂ.ಟಿ.ಸಿಯಲ್ಲಿ 2015 ರಲ್ಲಿ ಬಸ್ ದರ ಏರಿಕೆಯಾಗಿದ್ದಾಗ ಡೀಸೆಲ್ ದರ ರೂ.53.35 ಆಗಿತ್ತು. ಡೀಸೆಲ್ ದರ ಏರಿಸಿದ ಕೀರ್ತಿ‌ ಕೂಡ ಬಿಜೆಪಿಗೆ ಸಲ್ಲಬೇಕು ಎಂದು ಕುಟುಕಿದ್ದಾರೆ.

2023 ರಲ್ಲಿ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಿದ ಬಿ.ಜೆ.ಪಿ ಸರ್ಕಾರ ವೇತನ ಹೆಚ್ಚಳ ಪಾವತಿಗಾಗಿ ಅಥವಾ ಬಾಕಿ ವೇತನ ಪಾವತಿಸಲು ಯಾವುದೇ ಅನುದಾನವನ್ನು ನೀಡದೆ ಸಿಬ್ಬಂದಿಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಹೋಗಿದ್ದಾರೆ. ವೇತನ ಪಾವತಿಗೂ ಹಣವಿಲ್ಲದೆ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ನಾವು ಎಂದು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಹೇಳಿಲ್ಲ, ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದಷ್ಟೇ ಹೇಳಿರುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕೆ‌ ಎಸ್ ಆರ್ ಟಿ ಸಿ ಆದಾಯ: 2020 ರಲ್ಲಿ 1569 ಕೋಟಿ, 2021 ರಲ್ಲಿ 2037 ಕೋಟಿ, 2022 ರಲ್ಲಿ 3349 ಕೋಟಿ, 2023 ರಲ್ಲಿ 3930 ಕೋಟಿ ಇದೆ. ಲಾಭಕ್ಕೂ ಆದಾಯ ಗಳಿಕೆಗೂ ವ್ಯತ್ಯಾಸವೇ ತಿಳಿಯದ ಅಧಮರು ಇವರು. ಸಾರಿಗೆ ಸಂಸ್ಥೆಗಳನ್ನು ರು.5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಇವರಿಗೆ, ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share It

You cannot copy content of this page