ಬೆಂಗಳೂರು: ಕಲಾವಿದರ ಸಂಘದಲ್ಲಿ ಹೋಮ- ಹವನ ನಡೆಸಿದ್ದ ದೊಡ್ಡಣ್ಣ ಮತ್ತು ಪಟಾಲಂಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.
ಕಲಾವಿದರ ಸಂಘದ ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಿಂದ ದೊಡ್ಡ ಮತ್ತು ಸಂಬಂಧಪಟ್ಟವರಿಗೆ ನೊಟೀಸ್ ನೀಡಲಾಗಿದೆ. 15 ದಿನಗಳ ಒಳಗೆ ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ.
ಕಲಾವಿದರ ಸಂಘದ ಕಚೇರಿಯಲ್ಲಿ ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ- ಹವನ ನಡೆಸುತ್ತಿದ್ದೇವೆ ಎಂದು ದೊಡ್ಡಣ್ಣ ಮತ್ತು ರಾಕ್ ಲೈನ್ ವೆಂಕಟೇಶ್ ಹೋಮ ನಡೆಸಿದ್ದಾರೆ. ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ದರ್ಶನ್ ಪರ ನಡೆಯುತ್ತಿರುವ ಪೂಜೆ ಎಂಬ ಕಾರಣಕ್ಕೆ ಕೆಲವರು ಅಸಮಾಧಾನಗೊಂಡಿದ್ದರು.
ಈ ನಡುವೆ ಡಾ. ರಾಜ್ ಮರಣದ ನಂತರ ಕಲಾವಿದರ ಸಂಘದಲ್ಲಿ ಸರಿಯಾಗಿ ಚುನಾವಣೆ ನಡೆದು, ಪದಾಧಿಕಾರಿಗಳ ಆಯ್ಕೆಯಾಗಿಲ್ಲ, ವಾರ್ಷಿಕ ಲೆಕ್ಕಪತ್ರ ಸಲ್ಲಿಕೆಯಾಗಿಲ್ಲ ಎಂದು ಆರೋಪಿಸಿ, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದರು.
ಇದೀಗ ಎನ್.ಆರ್.ರಮೇಶ್ ದೂರಿನ ಅನ್ವಯ ಸಹಕಾರ ಸಂಘಗಳ ಮಹಾನಿಬಂಧಕರ ಕಚೇರಿ ದೊಡ್ಡಣ್ಣ ಮತ್ತು ಇನ್ನಿತರರಿಗೆ ನೊಟೀಸ್ ನೀಡಿ, ಹದಿನೈದು ದಿನಗಳಲ್ಲಿ ವಿವರಣೆ ನೀಡುವಂತೆ ಸೂಚನೆ ನೀಡಿದೆ. ಇಲ್ಲವಾದಲ್ಲಿ ಮುಂದಿನ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ.