ಉಪಯುಕ್ತ ಸುದ್ದಿ

ಸೂಪಾ ಅಣೆಕಟ್ಟೆಯಲ್ಲಿ ಪ್ರವಾಹದ ಮುನ್ಸೂಚನೆ:ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸ್ಥಳೀಯರಿಗೆ ಮನವಿ

Share It

ಬೆಂಗಳೂರು:ಕಾಳಿ ನದಿಗೆ ನಿರ್ಮಿಸಿರುವ ಸೂಪಾ ಜಲಾಶಯ ಗರಿಷ್ಠಮಟ್ಟ ತಲುಪಿದ್ದು, ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಡುವ ಸಾಧ್ಯತೆ ಇದೆ, ಹೀಗಾಗಿ, ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಅಣೆಕಟ್ಟೆ ಕೆಳದಂಡೆ ಜನರಿಗೆ ಕೆಪಿಸಿಎಲ್ ಮನವಿ ಮಾಡಿದೆ.

ಸೂಪಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದ ನೀರಿನ ಮಟ್ಟ ಸತತವಾಗಿ ಏರಿಕೆಯಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 564 ಮೀಟರ್ ಆಗಿದ್ದು, ನೀರಿನ ಸಂಗ್ರಹಣಾ ಸಾಮರ್ಥ್ಯ 147.55 ಟಿಎಂಸಿ ಆಗಿದೆ. ಪ್ರಸ್ತುತ (ಆ. 25ರಂದು) 558.95 ಅಡಿಗೂ ಹೆಚ್ಚು ನೀರು ನಿಂತಿದ್ದು, 126.662 ಟಿಎಂಸಿ ನೀರು ಸಂಗ್ರಹವಾಗಿದೆ. ಅಲ್ಲದೆ, ಜಲಾಶಯದ ಒಳಹರಿವು 25,954 ಕ್ಯುಸೆಕ್ ಇದೆ.

ಇದೇ ರೀತಿ ಒಳಹರಿವು ಮುಂದುವರಿದರೆ ಜಲಾಶಯ ಗರಿಷ್ಠಮಟ್ಟ ತಲುಪುವ ಸಾಧ್ಯತೆ ಇದ್ದು, ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಬೇಕಾಗುತ್ತದೆ. ಆದ್ದರಿಂದ ಅಣೆಕಟ್ಟೆ ದಂಡೆಯ ಮತ್ತು ನದಿ ಪಾತ್ರದುದ್ದಕ್ಕೂ ಇರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಮನವಿ ಮಾಡಿದೆ.

ಅಲ್ಲದೆ, ಸೂಪಾ ಅಣೆಕಟ್ಟೆ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ, ಜಲಸಾಹಸ ಕ್ರೀಡೆಗಳು ಸೇರಿ ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸಬಾರದು ಎಂದು ಇದೇ ವೇಳೆ ಕೋರಿದೆ.


Share It

You cannot copy content of this page