ಮೈಸೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಡಾ ಅಧ್ಯಕ್ಷರು ಚಿಕಿತ್ಸೆ ಪಡೆದು ಬಳಿಕ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದಿಂದಾಗಿ ಸಿಎಂ ಸಿದ್ದರಾಮಯ್ಯನವರ ಆಪ್ತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರಿಗೌಡ ಅವರು ಮೊದಲ ಬೆಂಗಳೂರಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ರೆ, ಮತ್ತೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆಯೋ ಏನೋ ಮತ್ತೆ ಅವರು ಇಂದು (ಸೆಪ್ಟೆಂಬರ್ 4) ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಡಾ ಹಗರಣಕ್ಕೆ ಅಧ್ಯಕ್ಷ ಮರೀಗೌಡ ಕಾರಣ ಎಂದು ಆರೋಪಗಳು ಕೇಳಿಬಂದಿವೆ. ಮುಡಾ ಹಗರಣ ಗೊಂದಲಕ್ಕೆ ಮೈಸೂರು ಪ್ರಾಧಿಕಾರದ ಅಧ್ಯಕ್ಷ ಕೆ ಮರೀಗೌಡ ವಿರುದ್ಧ ಸ್ವಪಕ್ಷೀಯರಾದ ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಮರೀಗೌಡನೇ ಕಪ್ಪುಚುಕ್ಕೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಹ ಮರೀಗೌಡ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಕಿಡಿಕಾರಿದ್ದರು.
ಈ ಮುಡಾ ನಿವೇಶನ ಹಂಚಿಕ ಪ್ರಕರಣ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಮರೀಗೌಡ ಪತ್ನಿ ಜಯಶ್ರೀ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ದಟ್ಟಗಳ್ಳಿಯಲ್ಲಿ 6 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಮುಡಾ ಹಗರಣ ಮತ್ತು ಪತ್ನಿಯ 6 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿ ಸುದ್ದಿ ಮಧ್ಯೆ ಮರೀಗೌಡ ಮತ್ತೆ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.