ಬೆಂಗಳೂರು: ಕೋವಿಡ್‌ನಲ್ಲಿ ಔಷಧ, ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ನಡೆದೆ ಎನ್ನಲಾಗಿರುವ ಸಾವಿರಾರು ಕೋಟಿ ರೂ. ಅಕ್ರಮ ಕುರಿತಂತೆ ನ್ಯಾ. ಕುನ್ಹಾ ನೇತೃತ್ವದ ತನಿಖಾ ಆಯೋಗದ ವರದಿಯನ್ನು ಅಧ್ಯಯನ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಅಧಿಕಾರಿಗಳ ಸಮಿತಿ ರಚನೆಗೆ ಸರ್ಕಾರ ಮುಂದಾಗಿದ್ದು, ಈ ಕ್ರಮವನ್ನು ಸಂಸದ ಡಾ.ಕೆ.ಸುದಾಕರ್ ಸ್ವಾಗತಿಸಿದ್ದಾರೆ.
ಕೋವಿಡ್‌ನ ತುರ್ತ ಪರಿಸ್ಥಿತಿಯನ್ನು ನಾವು ಎದುರಿಸಿದ್ದೇವೆ. ಸರ್ಕಾರ, ನಿವೃತ್ತ ನ್ಯಾಯಾಧೀಶರಿಂದ ಮಧ್ಯಂತರ ವರದಿ ತರಿಸಿಕೊಂಡಿದೆ. ಅದಕ್ಕೆ ನನ್ನ ಸ್ವಾಗತವಿದೆ. ಈ ವರದಿಯನ್ನು ಅಧಿಕಾರಿಗಳ ಪರಿಶೀಲನೆಗೆ ಕೊಟ್ಟಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆಂದು ಹೇಳಿದರು.
ಕೋವಿಡ್‌ನ್ನು ನಾನು ಒಬ್ಬ ನಿರ್ವಹಿಸಿಲ್ಲ, ಇಡೀ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದೆ. ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ. ನಾನು, ಬೊಮ್ಮಾಯಿ, ಯಡಿಯೂರಪ್ಪ ಮತ್ತು ಅಂದಿನ ಸಚಿವರೆಲ್ಲರೂ ಕೋವಿಡ್ ನಿರ್ವಹಿಸಿದ್ದೇವೆ.
ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ, ಇಲ್ಲೇ ಇರುತ್ತೇವೆ. ಅವರು ಸುಧಾಕರ್ ವಿರುದ್ಧ ತನಿಖೆ ಎಂದು ಹೇಳಿದ್ದಾರಾ? ಇಲ್ವಲ್ಲ. ನಾನು ಇನ್ನೂ ಮಧ್ಯಂತರ ವರದಿ ಓದಲಿಲ್ಲ. ಅಧಿಕಾರಿಗಳ ವ್ಯಾಖ್ಯಾನ ಏನು ಬರುತ್ತೆ ಎಂದು ಕಾದು ನೋಡೋಣ ಎಂದು ತಿಳಿಸಿದರು.
ಆದಷ್ಟು ಬೇಗ ಕೋವಿಡ್ ಬಗ್ಗೆ ಅಧಿಕಾರಿಗಳ ವರದಿ ಬರಲಿ. ಯಡಿಯೂರಪ್ಪನವರ ಕಾಲದಲ್ಲಿ ಯಾವ ರೀತಿಯ ಕೋವಿಡ್ ನಿರ್ವಹಣೆಯಾಗಿತ್ತು ಎಂದು ಗೊತ್ತಾಗಲಿ. ಅಧಿಕಾರಿಗಳ ವರದಿ ಬಂದ ನಂತರವೇ ನಾನು ಇದರ ಬಗ್ಗೆ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.