2024 ನೇ ಸಾಲಿನಲ್ಲಿ ಸರಕಾರದ ಅನುಮೋದನೆ | 3100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 31 ಹೊಸ ಹಾಸ್ಟೆಲ್ ಗಳನ್ನು ಆರಂಭಿಸಿದೆ.
ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಅನುದಾನ ಬಳಸಿಕೊಂಡಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ, ಎಂಬ ವಿಪಕ್ಷಗಳ ಟೀಕೆಗೆ ದಿಟ್ಟ ಉತ್ತರ ನೀಡಿರುವ ಕಾಂಗ್ರೆಸ್, ಅಭಿವೃದ್ಧಿಯ ಮೂಲಕ ಉತ್ತರ ಕೊಡಲು ಸಜ್ಜಾಗಿದ್ದು, 31 ಪರಿಶಿಷ್ಟ ಸಮುದಾಯದ ಹಾಸ್ಟೆಲ್ ಆರಂಭಿಸಿದೆ.
ಪ್ರಸ್ತುತ ವರ್ಷದಿಂದಲೇ ಹಾಸ್ಟೆಲ್ ಗಳು ಆರಂಭವಾಗಲಿದ್ದು, ಸಧ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಲಿವೆ. ಕೆಲವು ಜಿಲ್ಲೆಗಳಲ್ಲಿ ಪಾಲಿಟೆಕ್ನಿಕ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಎಸ್ಸಿಟಿಪಿ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ಬೆಂಗಳೂರು ನಗರದಲ್ಲಿ 2 ಬಾಲಕರ ಹಾಸ್ಟೆಲ್, ಒಂದು ಬಾಲಕಿಯರ ಹಾಸ್ಟೆಲ್ ಆರಂಭವಾಗಲಿವೆ. ಇನ್ನುಳಿದಂತೆ ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ದಾವಣಗೆರೆ, ಹಾಸನ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ ಆರಂಭವಾಗಲಿವೆ.
ಮೈಸೂರಿನಲ್ಲಿ 1 ಬಾಲಕರ ಹಾಸ್ಟೆಲ್, 2 ಬಾಲಕಿಯರ ಹಾಸ್ಟೆಲ್, ಗದಗ, ಹಾವೇರಿಯಲ್ಲಿ ತಲಾ 1 ಬಾಲಕಿಯರ ಹಾಸ್ಟೆಲ್, ರಾಯಚೂರು, ವಿಜಯನಗರದಲ್ಲಿ ತಲಾ 1 ಬಾಲಕರ ಹಾಸ್ಟೆಲ್ ಆರಂಭವಾಗಲಿವೆ. ಒಟ್ಟಾರೆ, 16 ಜಿಲ್ಲೆಗಳಲ್ಲಿ 16 ಬಾಲಕರ ಮತ್ತು 15 ಬಾಲಕಿಯರ ಹಾಸ್ಟೆಲ್ ಆರಂಭವಾಗಲಿವೆ.
ಬಾಡಿಗೆ ಕಟ್ಟಡ ಪಡೆಯಲು ಹಣ ಬಿಡುಗಡೆ: ಸರಕಾರದ ಕಟ್ಟಡಗಳು ಸಿಗದೆ ಇರುವ ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪ್ರತಿ ಹಾಸ್ಟೆಲ್ ಗೆ 17 ಲಕ್ಷ ರು.ಗಳಂತೆ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ.
ಕಟ್ಟಡ ನಿರ್ಮಾಣಕ್ಕೆ ಹೆಚ್ಚಿವರಿ ಅನುದಾನ ನಿಗದಿ: ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಅನುದಾನ ನಿಗದಿ ಮಾಡಲಾಗಿದೆ. ಪ್ರತಿ ಹಾಸ್ಟೆಲ್ ಗೆ ನಾಲ್ಕು ಕೋಟಿ ರು. ಅನುದಾನ ನಿಗದಿ ಮಾಡಲಾಗಿದೆ. ಆಯಾ ಜಿಲ್ಲೆಯ ಕಂದಾಯ ಇಲಾಖೆ ಮುಖ್ಯಸ್ಥರಿಗೆ ಅಗತ್ಯ ಭೂಮಿ ಒದಗಿಸಲು ಕೋರಲಾಗಿದೆ.
ಸಿಎ ಸೈಟ್ ಗಳು, ಇನ್ನಿತರ ಸರಕಾರಿ ಭೂಮಿ ಗುರುತಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಭೂಮಿ ಒದಗಿಸುವ ಗುರಿಯನ್ನು ನೀಡಲಾಗಿದೆ. ಒಂದು ವೇಳೆ ಸರಕಾರಿ ಭೂಮಿಯೇ ಸಿಗದಂತಹ ಪ್ರದೇಶಗಳಲ್ಲಿ ನಿವೇಶನ ಖರೀದಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ಕೋಟ್:
ಸರಕಾರಿ ಕಟ್ಟಡ ಇರುವ ಕಡೆ ಸರಕಾರಿ ಕಟ್ಟಡ ಬಳಸಿಕೊಳ್ಳಲಾಗುತ್ತದೆ. ಇಲ್ಲವಾದಲ್ಲಿ ಬಾಡಿಗೆ ಕಟ್ಟಡ ಪಡೆಯಲು ತೀರ್ಮಾನಿಸಲಾಗಿದೆ. 3100 ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಲಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಚ್ಚುವರಿ ಅರ್ಜಿ ಬಂದರೂ, ಪ್ರವೇಶಕ್ಕೆ ಅವಕಾಶ ನೀಡಲಿದ್ದೇವೆ.
- ಡಾ. ಜಿ.ಪಿ.ದೇವರಾಜ್,
ಜಂಟಿ ಆಯುಕ್ತರು(ಶಿಕ್ಷಣ)
ಸಮಾಜ ಕಲ್ಯಾಣ ಇಲಾಖೆ