ಇಂದು ದಾವಣಗೆರೆಯಲ್ಲಿ ಬಿಜೆಪಿ ‘ಬಿ’ ಟೀಮ್ ಸಭೆ?: ವಿಜಯೇಂದ್ರ ಟಾರ್ಗೆಟ್
ಬೆಂಗಳೂರು: ಬಿಜೆಪಿಯ ಭಿನ್ನಮತ ಸಧ್ಯಕ್ಕಂತೂ ತಣಿದಂತೆ ಕಾಣುತ್ತಿಲ್ಲ, ಇದರ ಮುಂದುವರಿದ ಭಾಗವಾಗಿ ಬಿಜೆಪಿಯ ಮತ್ತೊಂದು ಬಣ ದಾವಣಗೆರೆಯಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ನೇತ್ರತ್ವದಲ್ಲಿ ನಡೆಯುವ ಸಭೆಯಲ್ಲಿ ಮಧು ಬಂಗಾರಪ್ಪ, ಪ್ರತಾಪ್ ಸಿಂಹ, ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂಬ ಮಾಹಿತಿಯಿದೆ.
ಈ ನಡುವೆ ಯಡಿಯೂರಪ್ಪ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ.
ರಾಜ್ಯದ ಕಾಂಗ್ರೆಸ್ ಸರಕಾರದ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂಬುದು ಈ ನಾಯಕರ ಬೇಡಿಕೆಯಾಗಿದೆ. ಇದಕ್ಕಾಗಿಯೇ ಕೆಲ ದಿನಗಳಿಂದ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಕುಟುಂಬ ರಾಜಕಾರಣ ಮತ್ತು ಹೊಂದಾಣಿಕೆಯ ರಾಜಕಾರಣ ತೊಲಗಬೇಕು ಎಂಬುದು ಈ ನಾಯಕರ ಬೇಡಿಕೆಯಾಗಿದ್ದು, ಪಕ್ಷ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಹೈಕಮಾಂಡ್ ಸರಿಯಾಗಿ ಕ್ರಮ ಕೈಗೊಳ್ಳಲಿ ಎಂಬುದು ವಿಜಯೇಂದ್ರ ಬಣದ ಕೆಲ ನಾಯಕರ ಆಗ್ರಹವಾಗಿದೆ.
ಒಟ್ಟಾರೆ, ಕಾಂಗ್ರೆಸ್ ಸರಕಾರದ ಮೂಡ ಮತ್ತು ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಡಬೇಕಿದ್ದ ವಿಪಕ್ಷ ಬಿಜೆಪಿ, ತನ್ನೊಳಗಿನ ಭಿನ್ನಮತ ಶಮನಕ್ಕೆ ಸರ್ಕಸ್ ಮಾಡುವ ಸ್ಥಿತಿಗೆ ಬಂದು ತಲುಪಿದೆ.


