ಬರೇಲಿ: ಲಖಿಂಪುರದ ಖೇರಿಯಲ್ಲಿ ಸೆಪ್ಟೆಂಬರ್ 20 ರಂದು ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಶನಿವಾರ ಮುಂಜಾನೆ ಲಕ್ನೋದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ತೀವ್ರ ರಕ್ತಸ್ರಾವ ವಾಗುತ್ತಿದ್ದರೂ ಸಾಮಾಜಿಕ ಕಳಂಕಕ್ಕೆ ಹೆದರಿ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ ಹಾಗೂ ಪೊಲೀಸರಿಗೆ ಯಾವುದೇ ದೂರನ್ನು ನೀಡಿರಲಿಲ್ಲ. 11 ದಿನಗಳ ಬಳಿಕ ಸ್ಥಳೀಯ ಗ್ರಾಮವಾಸಿಯಾದ ಅರ್ಷದ್ ಅಲಿ (20) ಮೇಲೆ ಅತ್ಯಾಚಾರ ಪ್ರಕರಣ ಮತ್ತು ಪೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪವನ್ ಗೌತಮ್ ತಿಳಿಸಿದ್ದಾರೆ.
ತನಿಖೆಯಲ್ಲಿ ಘಟನೆ ನಡೆದ ದಿನ ಬಾಲಕಿಯು ಸಂಬಂಧಿಕರ ಮನೆಗೆ ಹೋಗಿದ್ದಳು. ಮನೆಗೆ ಒಂಟಿಯಾಗಿ ಹಿಂದಿರುಗುವಾಗ ಏಕಾಂತ ಸ್ಥಳದಲ್ಲಿ ಆರೋಪಿಯು ಚಾಕುವನ್ನು ತೋರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.
ಬಳಿಕ ಮನೆಗೆ ಬಂದ ಬಾಲಕಿ ಈ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಆರೋಪಿಯು ನೆರೆಹೊರೆಯಲ್ಲಿ ವಾಸಿಸುತ್ತಿದ್ದುದರಿಂದ ಅವನ ವಿರುದ್ಧ ದೂರನ್ನು ದಾಖಲಿಸಲಿಲ್ಲ. ಅತಿಯಾದ ರಕ್ತಸ್ರಾವ ಉಂಟಾದಾಗ ಬಾಲಕಿಯನ್ನು ತಡವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
“ಹಲ್ಲೆಯ ನಂತರ ಮನೆಯವರು ಅವಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ, ಬಹುಶಃ ಅವಳು ಬದುಕುಳಿಯುತ್ತಿದ್ದಳು. ಆರೋಪಿಗಳಿಗೆ ಶಿಕ್ಷೆ ಆಗಬೇಕು ” ಎಂದು ಬಾಲಕಿಯ ಸಂಬಂಧಿಕರು ಆಗ್ರಹಿಸಿದ್ದಾರೆ.