ಮೈಸೂರು : ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಕಾನೂನಾತ್ಮಕವಾಗಿ ಮಾಡುತ್ತಿದ್ದೇನೆ. ಯಾರದ್ದೋ ಹೇಳಿಕೆ ಆಧರಿಸಿ ಸಭೆ ಮಾಡಲು ಆಗುವುದಿಲ್ಲ. ಸಭೆ ಮುಂದೂಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಸಿಎಂ ಅವರು, ಬಿಜೆಪಿ ಸಂಸದ ಯದುವೀರ್ ಹೇಳಿಕೆ ಮುಖ್ಯವೋ ಕಾನೂನು ಮುಖ್ಯವೋ? ನಾನು ಕಾನೂನು ಪ್ರಕಾರವೇ ಇವತ್ತಿನ ಸಭೆ ಮಾಡುತ್ತಿದ್ದೇನೆ. ಕೋರ್ಟ್ನಲ್ಲಿ ತಡೆಯಾಜ್ಞೆ ತೆರವು ಆಗಿದ್ದಕ್ಕೆ ಸಭೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅಮಾನತು ವಿಚಾರ ಗೊತ್ತಿಲ್ಲ. 2009ರ ಹಿಂದಿನ ಬಡಾವಣೆಗೆ 50:50 ಬದಲಿ ನಿವೇಶನ ಅನ್ವಯ ಆಗುವುದಿಲ್ಲ. ಈ ಅಂಶ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಡಾ ಆದೇಶದ ಅಂಶಗಳು ಏನು ಎಂಬುದು ಸಹ ಗೊತ್ತಿಲ್ಲ. ಗೊತ್ತಿಲ್ಲದನ್ನು ನಾನು ಹೇಗೆ ವಿವರವಾಗಿ ಹೇಳಲಿ. ಆದೇಶದಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.
ಸರ್ಕಾರಕ್ಕೆ ಕೊರೊನಾ ಹಗರಣದ ಮಧ್ಯಂತರ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಮುಂದಿನ ಸಚಿವ ಸಂಪುಟದ ಮುಂದೆ ವರದಿ ಮಂಡಿಸುತ್ತೇನೆ. ಸಂಪುಟದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ. ವರದಿಯಲ್ಲಿ ಏನಿದೆ ಎಂಬುದನ್ನು ನಾನು ನೋಡಿಲ್ಲ. ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಗಮನಕ್ಕೆ ಬಂದಿಲ್ಲ.
ನನ್ನ ಗಮನಕ್ಕೆ ಬರದೆ ಸುಧಾಕರ್ಗೆ ಮಾಹಿತಿ ಕೊಟ್ಟವರು ಯಾರು? ಕುಂಬಳಕಾಯಿ ಕಳ್ಳ ಅಂದ್ರೆ ಏಕೆ ಹೆಗಲು ಮುಟ್ಟಿಕೊಳ್ಳಬೇಕು? ಕೆ.ಸುಧಾಕರ್ಗೆ ಸುಳ್ಳು ವರದಿ ಎಂದು ಹೇಗೆ ಗೊತ್ತಾಗುತ್ತದೆ?. ಸುಧಾಕರ್ ತಪ್ಪು ಮಾಡಿರುವುದು ಮಾನಸಿಕವಾಗಿ ಗೊತ್ತಿದೆ. ಹೀಗಾಗಿ ಅವನು ಆ ರೀತಿ ಮಾತನಾಡುತ್ತಿದ್ದಾನೆ ಎಂದು ಛೇಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಪಾವತಿಯಾಗದ ವಿಚಾರವಾಗಿ ಮಾತನಾಡಿದ ಸಿಎಂ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಮಾಹಿತಿ ಪಡೆಯುತ್ತೇನೆ. ಆದರೆ, ನಾವು ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಮಾಹಿತಿ ಪಡೆದು ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.