ಹೊಸದಿಲ್ಲಿ : ಕೋವಿಡ್ ಲಸಿಕೆ ಪಡೆಯುವುದರಿಂದ ಆಗುತ್ತಿರುವ ರಕ್ತ ಹೆಪ್ಪುಗಟ್ಟುವಿಕೆ ಸೇರಿ ಇನ್ನಿತರ ಅಡ್ಡ ಪರಿಣಾಮಗಳ ಕುರಿತ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ. ಫರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಜಾಗೊಳಿಸಿದೆ. ಜತೆಗೆ ಇದೊಂದು ಪ್ರಚಾರದ ಗಿಮಿಕ್ ಎಂದು ಅಭಿಪ್ರಾಯ ಪಟ್ಟಿದೆ.
ಇಂತಹ ಅರ್ಜಿಯ ಅವಶ್ಯಕತೆ ಏನಿದೆ. ಇದರ ಜತೆಗೆ ಲಸಿಕೆ ಪಡೆಯದಿದ್ದರೆ ಆಗುತ್ತಿದ್ದ ಪರಿಣಾಮಗಳೇನು ಎಂಬ ಬಗ್ಗೆಯೂ ಯೋಚಿಸಬೇಕಲ್ಲವೇ? ಈ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಇದು ಮೇಲ್ನೋಟಕ್ಕೆ ಜನರ ಗಮನಸೆಳೆಯುವ ಗಿಮಿಕ್ ಎಂಬಂತೆ ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಿಯಾ ಮಿಶ್ರಾ ಮತ್ತು ಇತರರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ನಡುವೆ ಅರ್ಜಿದಾರರ ಪರ ವಕೀಲರು ಕೂಡ ತಾವು ಲಸಿಕೆ ಪಡೆದಿದ್ದು, ಈವರೆಗೆ ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿಲ್ಲ ಎಂಬುದನ್ನು ಪೀಠದ ಮುಂದೆ ಒಪ್ಪಿಕೊಂಡ ಘಟನೆ ನಡೆಯಿತು.