ರಾಜಕೀಯ ಸುದ್ದಿ

ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ: ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

Share It

ಬೆಂಗಳೂರು: ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಒದಗಿಸಿಕೊಡುವಂತೆ ಮಂಡಳಿಯ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನಾನು ಈ ಪತ್ರ ಬರೆಯುತ್ತಿದ್ದೇನೆ’ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಉತ್ತರ ಕರ್ನಾಟಕದ ಕುಡಿಯುವ ನೀರು ಪೂರೈಸಲು ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF&CC) ವನ್ಯಜೀವಿ ಅನುಮೋದನೆಗಾಗಿ ದೀರ್ಘಕಾಲದಿಂದ ಬಾಕಿ ಉಳಿದಿದೆ. ಮಹದಾಯಿ ವಾಟರ್ ಡಿಸ್​ಪ್ಯೂಟ್ ಟ್ರಿಬ್ಯೂನಲ್ ಅವಾರ್ಡ್ ಅನ್ನು 14-08-2018 ರಂದು ಘೋಷಿಸಲಾಯಿತು ಮತ್ತು 27-02-2020 ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ.

ಅದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು (ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರ ನಾಲಾದಿಂದ 2.18 ಟಿಎಂಸಿ) ರಾಜ್ಯ ಸರ್ಕಾರವು 16-06-2022 ರಂದು CWC ಗೆ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ (ಲಿಫ್ಟ್ ಯೋಜನೆಗಳು) ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ವರದಿ ಸಲ್ಲಿಕೆ ಕುರಿತ ಪೋರ್ಟಲ್ ಸಂಖ್ಯೆಯನ್ನೂ ಉಲ್ಲೇಖಿಸಿದ್ದಾರೆ.

ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸಿದ್ದರಾಮಯ್ಯ: ಸೆ.18ರಂದು ಪತ್ರ ಬರೆದಿರುವ ಸಿದ್ದರಾಮಯ್ಯ, ಪ್ರಧಾನಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ನಮ್ಮ ಬಹುದಿನದ ಬೇಡಿಕೆಯಾಗಿರುವ ಯೋಜನೆಯ ಅನುಷ್ಠಾನಕ್ಕೆ ಕೇಂದ್ರಕ್ಕೆ ಒತ್ತಾಯಿಸಿದ್ದೆವು. ಕೇಂದ್ರ ಈವರೆಗೆ ಗಮನ ನೀಡಿಲ್ಲ, ನಮ್ಮ ಮನವಿಯ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಬೆಲೆ ಕೊಟ್ಟು ಅನುಮತಿ ನೀಡುತ್ತಾರೆ ಎಂಬ ನಂಬಿಕೆಯಿದೆ.

  • ಎನ್.ಎಚ್.ಕೋನರೆಡ್ಡಿ, ನವಲಗುಂದ ಶಾಸಕ

Share It

You cannot copy content of this page