ಮೂಡಾ ಹಗರಣದ ಆರೋಪ ಹೊತ್ತ ಹಾವೇರಿ ಕುಲಪತಿ ದಿನೇಶ್ ಕುಮಾರ್ ಅಮಾನತು ಮಾಡಿದ ಸರಕಾರ
ಬೆಂಗಳೂರು: ಮೂಡಾ ಹಗರಣದಲ್ಲಿ ಆರೋಪಿಯಾಗಿದ್ದ ಆಯುಕ್ತ ದಿನೇಶ್ ಕುಮಾರ್ ಎರಡು ದಿನದ ಹಿಂದಷ್ಟೇ ಹಾವೇರಿ ವಿವಿ ಕುಲಪತಿಯಾಗಿ ನೇಮಕವಾಗಿದ್ದರು. ಇದೀಗ ಸರಕಾರ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿದೆ.
ಮೂಡಾ ಹಗರಣದಲ್ಲಿ ಸರಕಾರದ ವಿರುದ್ಧ ಸಮರ ಸಾರಿರುವ ರಾಜ್ಯಪಾಲ ಗೆಹ್ಲೋಟ್, ದಿನೇಶ್ ಕುಮಾರ್ ವಿರುದ್ಧ ಆರೋಪಗಳಿರುವ ಕಾರಣ ನೀಡಿ ಅವರನ್ನು ಅಮಾನತು ಮಾಡುವಂತೆ ಸಲಹೆ ನೀಡಿದ್ದರು. ಈ ಸಲಹೆಯ ಅನ್ವಯ ಸರಕಾರದ ಪ್ರಧಾನ ಕಾರ್ಯದರ್ಶಿ ಉಮಾದೇವಿ, ದಿನೇಶ್ ಕುಮಾರ್ ಅವರನ್ನು ಹಾವೇರಿ ವಿವಿ ಕುಲಪತಿ ಹುದ್ದೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ದಿನೇಶ್ ಕುಮಾರ್ ವಿರುದ್ಧ ಮೂಡಾ ಅಕ್ರಮದ ಆರೋಪಗಳಿವೆ. ಮೂಡಾ ಹಗರಣದಲ್ಲಿ ದಿನೇಶ್ ಕುಮಾರ್ ಪ್ರಮುಖ ಆರೋಪಿಯಾಗಿದ್ದಾರೆ. ಮೂಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್, ಸಿಎಂ ಪತ್ನಿಗೆ ನೀಡಿರುವ ಹದಿನಾಲ್ಕು ನಿವೇಶನ ಸೇರಿದಂತೆ ಇನ್ನಿತರ ನಿವೇಶನ ಹಂಚಿಕೆಯಲ್ಲಿಯೂ ಅಕ್ರಮ ನಡೆಸಿದ್ದಾರೆ ಎಂಬ ಆರೋಪಗಳಿವೆ.
ಮೂಡಾ ಹಗರಣದ ಪ್ರಮುಖ ಆರೋಪಿಯಾಗಿದ್ದರೂ, ಸರಕಾರ ಎರಡು ದಿನಗಳ ಹಿಂದೆ ದಿನೇಶ್ ಕುಮಾರ್ ಗೆ ವಿವಿ ಕುಲಪತಿ ಹುದ್ದೆ ನೀಡಿತ್ತು. ಕೆಲವು ದಿನಗಳಿಂದ ಹುದ್ದೆಯ ನಿರೀಕ್ಷೆಯಲ್ಲಿದ್ದ ಹಗರಣದ ಆರೋಪಿಗೆ ಕುಲಪತಿ ಹುದ್ಸೆ ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿತ್ತು.
ದಿನೇಶ್ ಕುಮಾರ್ ನೇಮಕದ ವಿರುದ್ಧ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ನೇಮಕ ಪ್ರಶ್ನಿಸಿ ರಾಜ್ಯಪಾಲರಿಗೆ ಮನವಿಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ದಿನೇಶ್ ಕುಮಾರ್, ಅಮಾನತು ಮಾಡಲು ಶಿಫಾರಸು ಮಾಡಿದ್ದು, ಸರಕಾರ ತೀರ್ಮಾನ ತೆಗೆದುಕೊಂಡಿದೆ.


