ಒಂದು ಕೆಲಸವನ್ನು ಆರಂಭಿಸುವಾಗ ಮೊದಲು ಗಣೇಶನನ್ನು ಪೂಜಿಸಿ ಎಂದು ಹಿರಿಯರು ಹೇಳುತ್ತಾರೆ. ಕಾರಣ ಗಣೇಶನು ವಿಘ್ನ ವಿನಾಶಕ. ಅಷ್ಟಕ್ಕೂ ಗಣೇಶನಿಗೆ ಗರಿಕೆಯನ್ನೇ ಇಟ್ಟು ಯಾಕೆ ಪೂಜೆ ಮಾಡುತ್ತಾರೆ ಗೊತ್ತ. ಅವನಿಗೆ ಗರಿಕೆ ಇಷ್ಟ ಆಗಲು ಕಾರಣವೇನು ಎಂಬುದನ್ನು ತಿಳಿಯೋಣ.
ಮುಖ್ಯವಾಗಿ ಬುಧವಾರ ಗಣೇಶನ ದಿನ ಎಂದು ನಮ್ಮಲ್ಲಿ ಭಾವಿಸುತ್ತೇವೆ. ಅಂದು ನಾವು ಗಣಪನಿಗೆ ಗರಿಕೆಯನ್ನು ಇಟ್ಟು ಪೂಜೆ ಸಲ್ಲಿಸಿದರೆ ನಮ್ಮ ಕಷ್ಟಗಳು ದೂರವಾಗುತ್ತವೆ. ಹಾಗೇ ನಮ್ಮ ಬೇಡಿಕೆಗಳನ್ನು ಗಣಪನ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಜೊತೆಗೆ ಸಂಕಷ್ಟಿಯ ದಿನ ಗರಿಕೆ ಇಟ್ಟು ಪೂಜಿಸಿದರೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಬಲ್ಲವರು ಹೇಳುತ್ತಾರೆ.
ಪುರಾಣದ ಕಥೆಗಳ ಪ್ರಕಾರ ಓಮ್ಮೆ ಅನಲಾಸುರ ಎಂಬ ರಾಕ್ಷಸನು ಇಡೀ ಪ್ರಪಂಚವನ್ನೇ ತನ್ನ ಕಣ್ಣಿನ ಬೆಂಕಿಯಿಂದ ಸುಡಲು ಪ್ರಯತ್ನಿಸುತ್ತಾನೆ. ಆಗ ದೇವತೆಗಳು ಗಣಪನ ಬಳಿ ಬಂದು ಸಹಾಯ ಬೇಡುತ್ತಾರೆ. ಬಳಿಕ ಗಣೇಶ ಹಾಗೂ ಅನಲಾಸುರ ಯುದ್ಧವನ್ನು ಮಾಡುತ್ತಾರೆ. ಯುದ್ಧದಲ್ಲಿ ಅನಲಾಸುರ ಗಣೇಶನ ಕಡೆಗೆ ಬೆಂಕಿಯ ಉಂಡೆಗಳನ್ನು ಎಸೆಯುತ್ತಾನೆ. ಆಗ ಗಣೇಶ ವಿರಾಟ ಸ್ವರೂಪ ಪಡೆದು ರಾಕ್ಷಸನನ್ನು ನುಂಗಿ ಬಿಡುತ್ತಾನೆ. ಬಳಿಕ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿ ಹೊಟ್ಟೆಯು ಊದಿಕೊಂಡಿತು ಎಂದು ಹೇಳಲಾಗುತ್ತದೆ.
ಬಳಿಕ ಋಷಿಗಳು ಗಣೇಶನ ಈ ಅವಸ್ಥೆಯನ್ನು ಕಂಡು 21 ಗರಿಕೆ ಕುಡಿಗಳನ್ನು ಅವನ ತಲೆಯ ಮೇಲೆ ಇಡುತ್ತಾರೆ. ಇದರಿಂದಾಗಿ ಅವನ ಹೊಟ್ಟೆಯ ತಾಪಮಾನ ಕಡಿಮೆಯಾಗಿ ಗಣಪ ನಿಟ್ಟುಸಿರು ಬಿಡುತ್ತಾನೆ. ಇದರಿಂದಾಗಿ ಅವನಿಗೆ ಗರಿಕೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಗಣೇಶನಿಗೆ ಗರಿಕೆಯನ್ನು ಇಟ್ಟು ಪೂಜೆ ಸಲ್ಲಿಸಿದರೆ ಬುಧ ದೋಷವು ಕಳೆದು ಹೋಗುತ್ತದೆ. ಗರಿಕೆಯೂ ಗಣೇಶನ ಆತ್ಮವನ್ನು ತನ್ನತ್ತ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ನೀರಿನ ಹನಿಗಳಿಗೆ ದೇವರ ತತ್ವವನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ.
ನಾವು ಗಣೇಶನಿಗೆ ಗರಿಕೆಯನ್ನು ಅರ್ಪಣೆ ಮಾಡುವಾಗ ಎಚ್ಚರಿಕೆಯಿಂದ ಅರ್ಪಿಸಬೇಕು. ನಾವು ಗರಿಕೆಯನ್ನು ಬೆಸ ಸಂಖ್ಯೆಯಲ್ಲಿ ಅರ್ಪಿಸಬೇಕು. ನಿಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುವ ಪದ್ಧತಿ ಇದ್ದರೆ, ಗಣಪನ ಮುಖವನ್ನು ಬಿಟ್ಟು ಉಳಿದ ಭಾಗವನ್ನು ಗರಿಕೆಯಿಂದ ಅಲಂಕಾರ ಮಾಡಬಹುದು. ಇದರಿಂದ ಶಾಂತಿ ಲಭ್ಯವಾಗುತ್ತದೆ.