ನವಲಗುಂದ : ವ್ಯಕ್ತಿಯೋರ್ವ ಜೀವಂತ ಇದ್ದಾಗಲೇ ಮರಣ ಪ್ರಮಾಣಪತ್ರ ಪಡೆದ ಘಟನೆ ನವಲಗುಂದ ತಾಲೂಕಿನ ರಾಮಲಿಂಗ ಓಣಿಯಲ್ಲಿ ನಡೆದಿದೆ. ಇಮಾಮ್ ಹುಸೇನ್ ಮುಲ್ಲಾಣ್ಣವರ ಎಂಬುವವನೇ ಮರಣ ಪ್ರಮಾಣಪತ್ರ ಪಡೆದ ವ್ಯಕ್ತಿಯಾಗಿದ್ದಾನೆ.
ಇಮಾಮ್ ಹುಸೇನ್ ಸಂಬಂಧಿ ಮರಣ ಪ್ರಮಾಣಪತ್ರಕ್ಕೆ ನವಲಗುಂದ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈತ ಸಲ್ಲಿಸಿದ್ದನ್ನು ಪುರಸ್ಕರಿಸಿ ಪುರಸಭೆ ಮರಣ ಪ್ರಮಾಣಪತ್ರ ನೀಡಿದೆ. ಇಮಾನ್ ಮೃತಪಟ್ಟ ಬಗ್ಗೆ ಆಗಸ್ಟ್ 27ಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಕೊಟ್ಟ ಮಾರನೇ ದಿನವೇ ಪುರಸಭೆ ಮರಣ ಪ್ರಮಾಣಪತ್ರ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ. ಯಾವುದೇ ವ್ಯಕ್ತಿ ಮೃತಪಟ್ಟಾಗ ಪರಿಶೀಲನೆ ಮಾಡಿ ಐವರ ಸಹಿ ಪಡೆಯಬೇಕು. ವಿಚಿತ್ರವೆಂದರೆ ಈತನ ಪ್ರಮಾಣ ಪತ್ರಕ್ಕೆ ಸಹಿ ಮಾಡಿರುವ ಐವರ ಪೈಕಿ ಪುರಸಭೆ ಸದಸ್ಯರೊಬ್ಬರು ಇದ್ದಾರೆ.
ಇಮಾಮ್ ಹುಸೇನ್ ನವಲಗುಂದದ ಫೈನಾನ್ಸ್ ಮತ್ತು ಬ್ಯಾಂಕ್ಗಳಲ್ಲಿ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೆ, ತಾನೇ ಸತ್ತಿರುವುದಾಗಿ ಪ್ರಮಾಣಪತ್ರ ಕೊಡಲು ಪ್ಲಾನ್ ಮಾಡಿದ್ದ ಇಮಾಮ್, ತನ್ನ ಸಂಬಂಧಿಯ ಮೂಲಕ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಹಾಕಿಸಿದ್ದ.
ಸಂಬಂಧಿ ಮೌಲಾಸಾಬ್ ಆಗಸ್ಟ್ 21 ರಂದು ಇಮಾಮ್ ಮೃತಪಟ್ಟಿದ್ದಾನೆ ಎಂದು ನವಲಗುಂದ ಪುರಸಭೆಗೆ ಅರ್ಜಿ ಸಲ್ಲಿಸಿದ್ದ. ಅದನ್ನೇ ಇಮಾಮ್ ತನ್ನ ಸಂಬಂಧಿಗಳ ಮೂಲಕ ಸಾಲ ಪಡೆದ ಫೈನಾನ್ಸ್ ಮತ್ತು ಬ್ಯಾಂಕ್ಗಳಿಗೆ ನೀಡಿ ಬಚಾವ್ ಆಗಿದ್ದ. ಆದರೆ ಇದು ಹೇಗೋ ಜನರಿಗೆ ಗೊತ್ತಾಗಿತ್ತು.
ವಿಚಾರ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪುರಸಭೆ ಅಧಿಕಾರಿಗಳು, ಆತನಿಂದ ಪ್ರಮಾಣಪತ್ರ ವಾಪಸ್ ಪಡೆದು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆ ಮಾಡಿ ಸದ್ಯ ಅಧಿಕಾರಿಯೊಬ್ಬರಿಂದ ಇಡೀ ಪ್ರಕರಣದ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಾರೆ.

