ರಾಜಕೀಯ ಸುದ್ದಿ

ಮುಡಾ ಪ್ರಾಸಿಕ್ಯೂಶನ್ ಬಳಿಕ ರಾಜ್ಯಪಾಲರಿಂದ ಕೈ ಸರ್ಕಾರದ 6 ವಿಧೇಯಕಗಳು ರಿಜೆಕ್ಟ್!

Share It

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ಪರಿಣಾಮವೋ ಎಂಬಂತೆ ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ 6 ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಆ ಮೂಲಕ ಕಳೆದ ಜನವರಿಯಿಂದ ಇದುವರೆಗೂ ಒಟ್ಟು 11 ವಿಧೇಯಕಗಳನ್ನು ರಾಜ್ಯಸರ್ಕಾರಕ್ಕೆ ವಾಪಸ್ ಕಳುಹಿಸಿದಂತಾಗಿದೆ.

ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವ ಕ್ರಮಗಳು) ವಿಧೇಯಕ, ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ (ತಿದ್ದುಪಡಿ) ವಿಧೇಯಕಗಳನ್ನು ಎರಡನೇ ಬಾರಿಗೆ ಹಿಂದಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಶಾಸಕರನ್ನು ನೇಮಿಸುವುದಕ್ಕೆ ಇದ್ದಂತಹ ತೊಡಕನ್ನು ನಿವಾರಿಸುವ ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ವಿಧೇಯಕವನ್ನು ಆ. 16 ಮತ್ತು 17ರಂದು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.

ಜೊತೆಗೆ ಅದೇ ದಿನ ಕರ್ನಾಟಕ ಪುರಸಭೆಗಳು ಮತ್ತು ಕೆಲ ಇತರೆ ಕಾನೂನು (ತಿದ್ದುಪಡಿ) ವಿಧೇಯಕ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳನ್ನು ಕೂಡಾ ವಾಪಸ್ ಕಳುಹಿಸಿದ್ದಾರೆ. ಉಳಿದಂತೆ ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕ, ಕರ್ನಾಟಕ ನೋಂದಣಿ (ತಿದ್ದುಪಡಿ) ವಿಧೇಯಕಗಳನ್ನು ಕಳೆದ ಜುಲೈ 26ರಂದು ವಾಪಸು ಕಳುಹಿಸಲಾಗಿದೆ.

ರಾಜ್ಯಪಾಲರು ಕೇಳಿರುವ ಸ್ಪಷ್ಟನೆಗಳೇನು?:

ಸಹಕಾರ ಸಂಘಗಳ ಎಲ್ಲ ಸದಸ್ಯರಿಗೂ ಮತದಾನ ಹಕ್ಕು ನೀಡುವುದು ಹಾಗೂ ಸಹಕಾರ ಸಂಘಗಳ ಚುನಾವಣೆಗಾಗಿ ಪ್ರತ್ಯೇಕ ವಿಭಾಗ ರಚನೆ ಸೇರಿದಂತೆ ಇನ್ನಿತರ ಅಂಶಗಳುಳ್ಳ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2024ರಲ್ಲಿ ಸಾಕಷ್ಟು ಗೊಂದಲಗಳಿವೆ. ವಿಧೇಯಕವನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರು ನನಗೆ ಮನವಿ ಸಲ್ಲಿಸಿದ್ದಾರೆ ಹಾಗೂ ವಿಧೇಯಕದಲ್ಲಿನ ಅಂಶಗಳಿಗೆ ವ್ಯತಿರಿಕ್ತವಾದಂತಹ ನ್ಯಾಯಾಲಯದ ಆದೇಶಗಳಿವೆ. ಆ ಅಂಶಗಳ ಕುರಿತಂತೆ ಸೂಕ್ತ ಮಾಹಿತಿ ನೀಡಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಶಾಸಕರನ್ನು ನೇಮಕ ಮಾಡುವುದಕ್ಕೆ ಇದ್ದಂತಹ ತೊಡಕನ್ನು ನಿವಾರಿಸಲು ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದ್ದ ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ವಿಧೇಯಕದ ಬಗ್ಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಪ್ರತಿಯೊಂದು ಕಾಯ್ದೆಯಲ್ಲಿನ ಲೋಪ, ಕಾನೂನಾತ್ಮಕ ತೊಡಕು, ಗೊಂದಲ ಉಲ್ಲೇಖಿಸಿ ಅವುಗಳಿಗೆ ಸ್ಪಷ್ಟನೆ, ಹೆಚ್ಚಿನ ಮಾಹಿತಿಗೆ ಸೂಚಿಸಿ ವಿಧೇಯಕಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ.

ಯಾವ ಮಸೂದೆ ಸರ್ಕಾರಕ್ಕೆ ವಾಪಸ್?

1 ಕರ್ನಾಟಕ ಸಾರ್ವಜನಿಕ ಪರೀಕ್ಷಾ(ಭ್ರಷ್ಟಾಚಾರ ತಡೆ) ವಿಧೇಯಕ

2 ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ

3 ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್‌ ವಿಧೇಯಕ

4 ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆ) ವಿಧೇಯಕ

5 ಕರ್ನಾಟಕ ಪುರಸಭೆಗಳು ಮತ್ತು ಕೆಲ ಇತರೆ ಕಾನೂನು ವಿಧೇಯಕ

6 ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ

7 ಕರ್ನಾಟಕ ಸಹಕಾರ ಸಂಘಗಳ / (ತಿದ್ದುಪಡಿ) ವಿಧೇಯಕ

8 ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ

9 ರೇಣುಕಾ ಯಲ್ಲಮ್ಮ ದೇವಸ್ಥಾನ 9 ಅಭಿವೃದ್ಧಿ ಪ್ರಾಧಿಕಾರ ವಿಧೇಯಕ

10 ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕ

11 ಕರ್ನಾಟಕ ನೋಂದಣಿ (ತಿದ್ದುಪಡಿ) ವಿಧೇಯಕ


Share It

You cannot copy content of this page