ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಒಟ್ಟು 18 ಮನೆಗಳು ಹಾನಿಗೀಡಾಗಿವೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 12 ಮನೆಗಳು ಮಳೆಯಿಂದ ಭಾಗಶಃ ಹಾನಿಗೀಡಾಗಿವೆ. ಚಳ್ಳಕೆರೆ ತಾಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿವೆ ಮತ್ತು 3 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇನ್ನು ಹೊಳಲ್ಕೆರೆ ತಾಲ್ಲೂಕಿನಲ್ಲಿ 4 ಮನೆಗಳಿಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ ಮತ್ತು ಒಬ್ಬರು ಮಳೆ ಅನಾಹುತಕ್ಕೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.
ಇದೇ ರೀತಿ ಹೊಸದುರ್ಗ ತಾಲ್ಲೂಕಿನಲ್ಲಿ 2 ಮನೆಗಳು ಮಳೆಯಿಂದ ಭಾಗಶಃ ಹಾನಿಗೀಡಾಗಿವೆ. ಹಿರಿಯೂರು ತಾಲ್ಲೂಕಿನಲ್ಲಿ ಮಳೆಯಿಂದ 8 ಮನೆಗಳು ಭಾಗಶಃ ಹಾನಿಯಾಗಿವೆ ಮತ್ತು 1.61 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಚಳ್ಳಕೆರೆ ತಾಲೂಕಿನಲ್ಲಿ 17.5 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 8.5 ಮಿ.ಮೀ, ಹಿರಿಯೂರು ತಾಲ್ಲೂಕಿನಲ್ಲಿ 14.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕಿನಲ್ಲಿ 4.9 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 13.6 ಮಿ.ಮೀ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 4.2 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ 12.2 ಮಿ.ಮೀ ಮಳೆ ಸುರಿದಿದೆ.

