ಕೋಲಾರ: ಮಾಲೂರು ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಗೊಂದಲವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುಮಾವಣಾ ಆಯೋಗ ಮರುಪರಿಶೀಲನೆಗೆ ಜಿಲ್ಲಾಡಳಿತ ಕ್ಕೆ ಸೂಚನೆ ನೀಡಿದೆ. ಈ ಹಿನ್ನೆಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಗಸ್ಟ್ 13 ರಂದು ಇವಿಎಂ ಉಗ್ರಾಣ ವನ್ನು ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಾಲೂರಿನ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಬಿಜೆಪಿಯ ಮಂಜುನಾಥ್ ಗೌಡ ವಿರುದ್ಧ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಗೆಲುವನ್ನು ಪ್ರಶ್ನಿಸಿ ಮಂಜುನಾಥ್ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಮರು ಮತ ಎಣಿಕೆ ಅಗತ್ಯತೆಯನ್ನು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು.
ಚುನಾವಣಾ ಅಯೋಗ ಎಲ್ಲ ಅಭ್ಯರ್ಥಿಗಳ ಸಮ್ಮುಖದಲ್ಲಿ ಇವಿಎಂ ಉಗ್ರಾಣವನ್ನು ತೆರೆದು, ಮರುಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಪರಿಶೀಲನೆ ವೇಳೆ ಏನಾದರೂ ತಪ್ಪುಗಳಾಗಿರುವ ಸೂಚನೆ ಸಿಕ್ಕಿದ್ದಲ್ಲಿ, ಮರು ಮತ ಎಣಿಕೆ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.
ಒಂದು ವರ್ಷದಿಂದ ಇವಿಎಂ ಸ್ಟ್ರಾಂಗ್ ರೂಮ್ ಕ್ಲೋಸ್ ಮಾಡಿದ್ದು, ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ ಅದನ್ನು ತೆರೆಯಲು ಅಗತ್ಯವಾದ ಸಿದ್ಧತೆಗಳನ್ನು ಜಿಲ್ಲಾಡಳಿತ ನಡೆಸಿದೆ. ಮಂಗಳವಾರ ಎಲ್ಲ ಪಕ್ಷದ ಅಭ್ಯರ್ಥಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಿದೆ.