ಅಪರಾಧ ಸುದ್ದಿ

ಕಳವು ಮಾಡಿದ್ದ 894 ಮೊಬೈಲ್ ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು: CEIR ಪೋರ್ಟಲ್ ಸಹಾಯದಿಂದ ಕಾರ್ಯಾಚರಣೆ

Share It

ಬೆಂಗಳೂರು :‌ ಕದ್ದು ಮಾರಾಟ ಮಾಡಲಾಗಿದ್ದ 894 ಮೊಬೈಲ್ ಫೋನ್‌ಗಳನ್ನು ಬೆಂಗಳೂರಿನ ಇಂಟಿಗ್ರೇಟೆಡ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸಿಬ್ಬಂದಿ ವಶಕ್ಕೆ ಪಡೆದಿದ್ದು,ವಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್ ಸಹಾಯದಿಂದ ಈ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನವಾದ ಅಥವಾ ಕಳೆದುಕೊಂಡ ಮೊಬೈಲ್ ಫೋನ್‌ನಲ್ಲಿರುವ ಡೇಟಾವನ್ನು ಅಳಿಸಲು ಅಥವಾ ಫೋನ್ ಬ್ಲಾಕ್ ಮಾಡಲು ಅನುಕೂಲಕರವಾಗುವಂತೆ 2023ರಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್‌ ಪರಿಚಯಿಸಿದೆ. ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್‌ಗೆ ತೆರಳಿ ಫೋನ್‌ನ ಇಂಟರ್ನ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ (IMEI) ನಂಬರ್ ನಮೂದಿಸಬೇಕಾಗುತ್ತದೆ. ಇದರಿಂದ ಕಳೆದು ಹೋದ ಫೋನ್‌ನಲ್ಲಿ ಬೇರೆ ಯಾವುದಾದರೂ ನಂಬರ್ ಚಾಲ್ತಿಯಲ್ಲಿದ್ದರೆ ಪತ್ತೆಹಚ್ಚಲು ಸಹಕಾರಿಯಾಗುತ್ತದೆ.

894 ಫೋನ್‌ಗಳನ್ನು ವಶ : ಮಾರ್ಚ್ 2024ರಿಂದ ಇಲ್ಲಿಯವರೆಗೆ ಸಿಇಐಆರ್ ಪೋರ್ಟಲ್‌ನಲ್ಲಿ ನಮೂದಿಸಲ್ಪಟ್ಟಿದ್ದ ಐಎಂಇಐ ನಂಬರ್‌ಗಳು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೊಬೈಲ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 894 ಫೋನ್‌ಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳ ಪೈಕಿ 522 ಫೋನ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದ್ದು, ಇನ್ನುಳಿದ 372 ಫೋನ್‌ಗಳ ವಾರಸುದಾರರು ಸೂಕ್ತ ದಾಖಲೆಗಳನ್ನು ಇಂಟಿಗ್ರೇಟೆಡ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಸಲ್ಲಿಸಿ ವಾಪಸ್​ ಪಡೆಯಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಐಷಾರಾಮಿ ಜೀವನ ನಡೆಸಲು ದುಬಾರಿ ಬೆಲೆಯ ಫೋನ್‌ಗಳನ್ನು ಕಳ್ಳತನ‌ ಮಾಡುತ್ತಿದ್ದ ಸಿಕ್ಕಿಂ ಮೂಲದ ದಿವಾಸ್ ಕಮಿ (22), ಆರೋಹನ್ ಥಾಪಾ (28) ಹಾಗೂ ನೇಪಾಳ ಮೂಲದ ಆಸ್ಮಿತಾ (24) ಎಂಬ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದು, ಅವರಿಂದ 40 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 39 ಮೊಬೈಲ್ ಫೋನ್‌ಗಳು, 1 ಡಿಜಿಟಲ್ ವಾಚ್, 1 ಡಿಜಿಟಲ್ ಕ್ಯಾಮೆರಾ ವಶಕ್ಕೆ ಪಡೆದಿರುವುದಾಗಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ. ಪರಶುರಾಮ ಮಾಹಿತಿ ನೀಡಿದ್ದಾರೆ.

ಪತಿಯನ್ನು ತೊರೆದಿದ್ದ ಆಸ್ಮಿತಾ, ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ದಿವಾಸ್ ಕಮಿ ಜೊತೆ ಲಿವ್ ಇನ್ ಸಂಬಂಧದಲ್ಲಿ ವಾಸವಿದ್ದಳು. ದಿವಾಸ್ ಕಮಿ‌ ಹಾಗೂ ಆರೋಹನ್ ಥಾಪಾ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದರು. ಆಸ್ಮಿತಾಳ ಜೊತೆ ಐಷಾರಾಮಿ ಜೀವನ ನಡೆಸಲು ಸ್ನೇಹಿತ ಆರೋಹನ್ ಥಾಪಾ ಜತೆ ಸೇರಿ ದಿವಾಸ್ ಕಮಿ ದುಬಾರಿ ಮೊಬೈಲ್‌ಗಳನ್ನು ಕದಿಯುತ್ತಿದ್ದ. ಬಳಿಕ ಅವುಗಳನ್ನು ಆಸ್ಮಿತಾಳ ಮೂಲಕ ಆರೋಪಿಗಳಿಬ್ಬರೂ ಮಾರಾಟ ಮಾಡಿಸುತ್ತಿದ್ದರು. ಕಳೆದ ವಾರ ಒಂದೇ ರಾತ್ರಿ ಬೆಳ್ಳಂದೂರು ಹಾಗೂ ವರ್ತೂರು ಠಾಣೆಗಳ ವ್ಯಾಪ್ತಿಯಗಳಲ್ಲಿರುವ ಎರಡು ಶೋ ರೂಮ್‌ಗಳ ಶಟರ್‌ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು ಮೊಬೈಲ್ ಫೋನ್‌ಗಳನ್ನು ದೋಚಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಪರಾರಿಯಾಗಿದ್ದರು ಎಂದು ಪರಶುರಾಮ ಮಾಹಿತಿ ನೀಡಿದ್ದಾರೆ.


Share It

You cannot copy content of this page