ಬೆಂಗಳೂರು: ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ಮತ್ತು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಿವೆ. ಇದು ಯುನಿಸೆಪ್ ನೀಡಿರುವ ವರದಿಯ ಸಾರಾಂಶ.
ಯುನಿಸೆಫ್ ವರದಿ ಪ್ರಕಾರ 370 ಮಿಲಿಯನ್ ಹೆಣ್ಣುಮಕ್ಕಳು ತಮ್ಮ ವಯಸ್ಸು 18 ವರ್ಷ ದಾಟುವ ಮುನ್ನ ಲೈಂಗಿಕ ದೌರ್ಜನ್ಯ ಕ್ಕೆ ಬಲಿಯಾಗುತ್ತಿದ್ದಾರೆ. ಇನ್ನಿತರ ಮಹಿಳಾ ದೌರ್ಜನ್ಯ ಸೇರಿದರೆ, ಪ್ರಪಂಚದ 650 ಮಿಲಿಯನ್ ಮಹಿಳೆಯರು ದೌರ್ಜನ್ಯದ ಬಲಿಪಶುಗಳಾಗುತ್ತಿದ್ದಾರೆ ಎನ್ನಲಾಗಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಜತೆಗೆ ಇನ್ನಿತರ ಆನ್ ಲೈನ್ ಕಿರುಕುಳ, ಸೈಬರ್ ಕ್ರೈಮ್ ವ್ಯಾಪ್ತಿಯಲ್ಲಿ ನೋಡಿದರೆ ಪ್ರತಿ 5 ರಲ್ಲಿ ಒಬ್ಬ ಮಹಿಳೆ ಇಂತಹ ಒಂದಿಲ್ಲೊಂದು ದೌರ್ಜನ್ಯಕ್ಕೆ ಒಳಗಾಗಿಯೇ ಇರುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ದೌರ್ಜನ್ಯ ಬಹುತೇಕ ಸಂದರ್ಭಗಳಲ್ಲಿ ಪರಿಚಯಸ್ಥರು, ಕುಟುಂಬಸ್ಥರು, ಶಾಲೆಗಳ ಸಂದರ್ಭದಲ್ಲಿ ನಡೆಯುತ್ತಿದೆ ಎಂಬುದು ವಿಪರ್ಯಾಸ. ಆಫ್ರಿಕಾ ದೇಶಗಳಲ್ಲಿ ಒಟ್ಟು ಪ್ರಕರಣದ ಶೇ. 22 ಪ್ರಕರಣಗಳು ಕಂಡುಬಂದಿದ್ದು, ಜಠಿಲ ಆಡಳಿತ ವ್ಯವಸ್ಥೆ, ಕಾನೂನು ವ್ಯವಸ್ಥೆ ವೈಫಲ್ಯ, ಹೆಣ್ಣು ಮಕ್ಕಳಲ್ಲಿ ಅರಿವಿನ ಕೊರತೆಯಿಂದ ಪ್ರಕರಣಗಳು ಹೆಚ್ಚಾಗುತ್ತಿದೆ.
ಅಂಕಿ-ಅಂಶಗಳ ಪ್ರಕಾರ ಈ ಪ್ರಕರಣಗಳ ಬಹುಪಾಲು ದೌರ್ಜನ್ಯ 14 ರಿಂದ 17 ವರ್ಷ ವಯಸ್ಸಿನವರ ಮೇಲೆ ನಡೆಯುತ್ತಿದೆ. ಈ ಸಂದರ್ಭದ ಗಾಯ, ಮಾನಸಿಕ ಹಿಂಸೆ ಹೆಣ್ಣುಮಕ್ಕಳನ್ನು ಜೀವನಿಡೀ ಕಾಡುತ್ತದೆ. ಇಂತಹ ಹೆಣ್ಣುಮಕ್ಕಳು ಸಿಟ್ಟು, ಸಿಡುಕು ಮತ್ತು ಸಂಬಂಧಗಳ ನಡುವಿನ ನಂಬಿಕೆ ಕೊರತೆಯನ್ನು ಅನುಭವಿಸುತ್ತಾರೆ ಎಂದು ವರದಿ ಉಲ್ಲೇಖಿಸಿದೆ.