ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಮಾಡಿದ ಸಾಲ ಇಂದಿನ ಪರಿಸ್ಥಿತಿಗೆ ಕಾರಣ: ರಾಮಲಿಂಗ ರೆಡ್ಡಿ
ಬೆಂಗಳೂರು: ಬಿಜೆಪಿಯವರೇ ತಮಗೆ ಅನ್ವರ್ಥವಾಗಿರುವ ಚಿಪ್ಪು ಚೊಂಬುಗಳನ್ನು ನಮಗೆ ಅಂಟಿಸಲು ಹೊರಟಿರುವ ತಮ್ಮ ವೃಥಾ ಪ್ರಯತ್ನ ಫಲಿಸುವುದಿಲ್ಲ ಎಂಬುದನ್ನು ಆದಷ್ಟು ಬೇಗ ಮನನ ಮಾಡಿಕೊಳ್ಳಲು ಪ್ರಯತ್ನಿಸಿ. ಪ್ರಯತ್ನ ಇವತ್ತಲ್ಲ ನಾಳೆ ಫಲ ಖಂಡಿತ ನೀಡುತ್ತದೆ ಎಂದು ರಾಮಲಿಂಗ ರೆಡ್ಡಿ ಟಾಂಗ್ ನೀಡಿದ್ದಾರೆ.
ತಮ್ಮ ಬಿಜೆಪಿ ಸರ್ಕಾರವು ಬಿಟ್ಟು ಹೋಗಿದ್ದ ₹5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸಬೇಕಾಗಿರುವುದು ನಾವು ಎಂದು ಟ್ವೀಟ್ ಮಾಡಿದ್ದಾರೆ.
2023 ಮಾರ್ಚ್ ನಲ್ಲಿ , 38 ತಿಂಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳ ಮತ್ತು 38 ತಿಂಗಳ ಅರಿಯರ್ಸ್, ನಿವೃತ್ತಿ ಹೊಂದಿದ ಸಿಬ್ಬಂದಿಗೆ ಬಾಕಿ ಹಣ ನೀಡದೆ, ಇವುಗಳಿಗೆ ಬೇಕಾದ ಯಾವುದೇ ಅನುದಾನ ಒದಗಿಸದೆ, ನಿವೃತ್ತಿ ಹೊಂದಿದ 11,694 ಸಿಬ್ಬಂದಿಗೆ ತಮ್ಮ ಕಾಲದ ಉಪಧನ ಮತ್ತು ಗಳಿಕೆ ರಜೆ ಬಾಕಿ ಹಣ ₹224.05 ಕೋಟಿ ನಾವು ಪಾವತಿಸಿದ್ದೇವೆ. ತಮ್ಮ ಚಿಪ್ಪು ಚೊಂಬು ಸರ್ಕಾರಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮನ್ನು ಟೀಕೆ ಮಾಡುವ ವಿಜಯೇಂದ್ರ ಅವರನ್ನು ಖಾರವಾಗಿ ಕೆಣಕಿರುವ ರಾಮಲಿಂಗ ರೆಡ್ಡಿ ಅವರು, ನಿಮ್ಮಪ್ಪನ ಕಾಲದ ಅಧಿಕಾರ ಸರಿಯಾಗಿದ್ದರೆ, ಇಂದು ಸಾರಿಗೆ ಸಂಸ್ಥೆಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮ್ಮ ಪಕ್ಷದ ಅಧಿಕಾರವಧಿಯ ಕೊಳೆ ತೊಳೆಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದರ ಅರಿವು ನಿಮಗಿರಬೇಕು ಎಂದು ಕುಟುಕಿದ್ದಾರೆ.
38 ತಿಂಗಳು ತಡವಾಗಿ ವೇತನ ಪರಿಷ್ಕರಿಸಿದ ಅವಧಿ ತಡವಲ್ಲವೇ ? ತಾವು ಪಾವತಿಸದೇ ಹೋದ 38 ತಿಂಗಳ ಬಾಕಿ ಅರಿಯರ್ಸ್ ಅನ್ನು ನಾವು ಪಾವತಿಸಿಲ್ಲ ಎಂದು ಹೇಳುವುದಕ್ಕೆ ನಾಚಿಕೆಯಾಗಬೇಡವೇ ?
ಒಂದೇ ಒಂದು ನೇಮಕಾತಿ ಮಾಡದೇ, ಹೊಸ ಬಸ್ಸುಗಳ ಸೇರ್ಪಡೆ ಮಾಡದೇ, ಸಂಪೂರ್ಣ ಶೂನ್ಯ ಅಭಿವೃದ್ಧಿ, ಮಾಡಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು, 15 ದಿವಸಗಳ ಕಾಲ ಯಶಸ್ವಿ ಮುಷ್ಕರ ನಡೆಸಿ ಸಾವಿರಾರು ನೌಕರರನ್ನು ವಜಾ ಮಾಡಿ ಅವರನ್ನು ನಾವು ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳುವುದಕ್ಕೆ ಮನಸಾಕ್ಷಿ ಎಂಬುದು ಇದೆಯೇ ನಿಮಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ತಮ್ಮ ಕಾಲದ 15 ದಿವಸಗಳ ಕಾಲ ಸಾರಿಗೆ ಮುಷ್ಕರದಿಂದ ರಾಜ್ಯದ ಜನರು ಬಸ್ಸಿಲ್ಲದೆ ಕಂಗೆಟ್ಟಿದ್ದನ್ನು ಮರೆತುಬಿಟ್ಟಿದ್ದೀರಾ?
ಸಾರಿಗೆ ನೌಕರರನ್ನು ಬೀದಿಗೆ ಬೀಸಾಕಿ, ಅಮಾನತು ,ವಜಾ ಎಂದು ಕೋರ್ಟ್ ಕಛೇರಿ ಅಲೆಯುವಂತೆ ಮಾಡಿದ ತಮಗೆ ಅವರ ಬಗ್ಗೆ ಈಗ ಕಳಕಳಿಯೇ?
ಸಾರಿಗೆ ಸಂಸ್ಥೆಗಳಲ್ಲಿ ಅಭಿವೃದ್ಧಿ ಏನು ಎಂಬುದನ್ನು ಎರಡು ವರ್ಷಗಳಲ್ಲಿಯೇ ಮಾಡಿ ತೋರಿಸಿದ್ದೇವೆ. ತಮ್ಮ ದುರಾಡಳಿತದ ಕೊಳೆ ತೊಳೆಯಲು ಐದು ವರುಷ ಕೂಡ ಕಡಿಮೆಯೇ ಎಂದು ತಿಳಿಸಿದ್ದು, ಸಾರಿಗೆ ನೌಕರರ ಹಿತ ಕಾಯುವ ಬದ್ಧತೆ ನಮ್ಮದಾಗಿದೆ ಎಂದು ಭರವಸೆ ನೀಡಿದ್ದಾರೆ.